ಆಗ್ರಾ (ಉತ್ತರ ಪ್ರದೇಶ):ಇಲ್ಲಿನ ಸಿಕಂದ್ರ ಪ್ರದೇಶದ ವಸತಿ ಅಭಿವೃದ್ಧಿ ಸೆಕ್ಟರ್ 14ರಲ್ಲಿ ಪಾಸ್ಪೋರ್ಟ್ ಇಲ್ಲದೇ ಅಕ್ರಮವಾಗಿ ನೆಲೆಸಿದ್ದ 40 ಮಂದಿ ಬಾಂಗ್ಲಾದೇಶಿಯರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಸಿಟಿ ಡಿಸಿಪಿ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದ್ದು, ನಕಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಂದಿ ವಾಸಿಸುತ್ತಿದ್ದ 15 ಮಂದಿ ಪುರುಷರು, 13 ಮಂದಿ ಮಹಿಳೆಯರು ಮತ್ತು 12 ಮಂದಿ ಮಕ್ಕಳನ್ನು ಬಂಧಿಸಲಾಗಿದೆ ಎಂದು ಆಗ್ರಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸಿಕಿಂದ್ರ, ಜಗದೀಶ್ಪುರ, ಹರಿಪರ್ವತ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ಇಲ್ಲಿನ ಹೌಸಿಂಗ್ ಡೆವೆಲಪ್ಮೆಂಟ್ ಸೆಕ್ಟರ್ 14ರಲ್ಲಿನ ಖಾಲಿ ನಿವೇಶನದಲ್ಲಿ ಹುಲ್ಲಿನ ಗುಡಿಸಲು ಹಾಕಿಕೊಂಡು ಅನಧಿಕೃತವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾದೇಶಿಗರು ವಾಸವಾಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆ ಈ ಕುರಿತು ತನಿಖೆಗೆ ಮುಂದಾಗಿದ್ದು, ಅವರನ್ನೆಲ್ಲಾ ಬಂಧಿಸಲಾಗಿದೆ. ಬಾಂಗ್ಲಾದೇಶಿಯರನ್ನು ಅಕ್ರಮವಾಗಿ ಇಲ್ಲಿಗೆ ಕರೆತಂದ ಕಿಂಗ್ಪಿನ್ಗೆ ಹುಡುಕಾಟ ನಡೆಸಲಾಗಿದೆ. ಇವರೆಲ್ಲರೂ ಬಂಗಾಳದ ಗಡಿ ದಾಟಿ ಬಿಹಾರ ಮೂಲಕ ಭಾರತಕ್ಕೆ ಬಂದಿದ್ದಾರೆ. ಬಿಹಾರದಿಂದ ಬಳಿಕ ಉತ್ತರ ಪ್ರದೇಶಕ್ಕೆ ಬಂದಿದ್ದು, ತಲಾ ವ್ಯಕ್ತಿಗೆ 20 ಸಾವಿರ ನೀಡುವ ಒಪ್ಪಂದದಿಂದ ಕರೆತರಲಾಗಿದೆ ಎಂದು ಸಿಟಿ ಡಿಸಿಪಿ ಮಾಹಿತಿ ನೀಡಿದರು.
ಇನ್ನು, ಮಥುರಾದಲ್ಲಿ ಕೂಡ ಪಾಸ್ಪೋರ್ಟ್ ಇಲ್ಲದೇ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಇತರೆ ದೇಶದವರನ್ನು ಮತ್ತು ರೋಹಿಂಗ್ಯಾಗಳನ್ನು ಭಾರತದಲ್ಲಿ ಅಕ್ರಮವಾಗಿ ಇರಲು ಅವಕಾಶ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಮಹೊಮ್ಮದ್ ಕಮರುಲ್ ನನ್ನು ಶನಿವಾರ ಸಂಜೆ ನೇ ಬಸ್ತಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಆಗ್ರಾದಿಂದ ಬಾಂಗ್ಲಾದೇಶದ ಪ್ರಜೆಯೊಬ್ಬ ಬರುತ್ತಿರುವ ಬಗ್ಗೆ ಸೇನೆ ನೀಡಿದ ಸುಳಿವಿನ ಮೇರೆಗೆ ಬಲೆ ಬೀಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.