ಸೋಪೋರ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿಯಾಗಿ ಸೋಪೋರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ (ಜೆಇಎಂ) ಗುಂಪಿಗೆ ಸೇರಿದ ಸಹಚರನೊಬ್ಬನನ್ನು ಬಂಧಿಸಿದ್ದಾರೆ. ಭದ್ರತಾ ಪಡೆಗಳು ಆತನಿಂದ ನಿಷೇಧಿತ ಸಾಮಗ್ರಿಗಳು ಸೇರಿ ಒಂದು ಕೈ ಗ್ರೆನೇಡ್ ವಶಕ್ಕೆ ಪಡೆದಿವೆ. ಬಂಧಿತ ಶಂಕಿತ ಉಗ್ರನನ್ನು ವಗೂಬ್ ಹೈಗಂ ನಿವಾಸಿ ಅಬ್ ರಶೀದ್ ವಾನಿಯ ಪುತ್ರ ಫಾರೂಕ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ.
ಟಾರ್ಜೂ ಪೊಲೀಸ್ ಠಾಣೆ ವ್ಯಾಪ್ತಿ ಬರುವ ರೈಲ್ವೆ ಕ್ರಾಸಿಂಗ್ ಸೇತುವೆ ಸಮೀಪ ಹೈಗಮ್‌ನಲ್ಲಿ ಶಂಕಿತ ಭಯೋತ್ಪಾದಕನು ತಂಗಿರುವ ನಿರ್ದಿಷ್ಟ ಮಾಹಿತಿ ಪಡೆದ ಪೊಲೀಸರು ಮತ್ತು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ (52RR) ನ 52 ಬೆಟಾಲಿಯನ್ ಜಂಟಿಯಾಗಿ ಮೊಬೈಲ್ ವಾಹನ ಚೆಕ್ ಪೋಸ್ಟ್ (MVCP) ಅನ್ನು ಸ್ಥಾಪಿಸಿದ್ದರು.
ಪೊಲೀಸರು ಮತ್ತು ಭಾರತೀಯ ಸೇನಾ ಪಡೆಯ ಶೋಧ ಕಾರ್ಯಾಚರಣೆ ವೇಳೆ ಶಂಕಿತ ಉಗ್ರ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದನು. ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಚಾಕಚಕ್ಯತೆಯಿಂದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಪೊಲೀಸರು ಹಾಗೂ ಸೇನೆ ಕೈಗೊಂಡ ಪ್ರಾಥಮಿಕ ತನಿಖೆ ನಂತರ ಆರೋಪಿ ಜೆಎಂಗೆ ಭಯೋತ್ಪಾದಕ ಸಹಚರನಾಗಿ ಕೆಲಸ ಮಾಡುತ್ತಿರುವುದು ಬಯಲಿಗೆ ಬಂದಿದೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಗುಂಪಿನ ಜೊತೆ ಸೇರಿ ಶಂಕಿತ ಉಗ್ರ ಇತರ ರಾಜ್ಯಗಳ ನೌಕರರು ಸೇರಿದಂತೆ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದನು ಎಂದು ತಾರ್ಜೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಎಲ್‌ಇಟಿ ಭಯೋತ್ಪಾದಕನ ಬಂಧಿಸಿ ಅಪಾರ ಶಸ್ತಾಸ್ತ್ರ ವಶ:ಕಳೆದ ವಾರ ಪೊಲೀಸರು ಹಾಗೂ ಸೇನಾ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೋಪೋರ್‌ನಲ್ಲಿ ಮತ್ತೋರ್ವ ಎಲ್‌ಇಟಿ ಭಯೋತ್ಪಾದಕನನ್ನು ಬಂಧಿಸಿ ಆತನಿಂದ ಅಪಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಕ್ಕೆ ವಶಪಡೆದಿದ್ದರು. ಆರೋಪಿಯನ್ನು ಮಂಜ್ ಸೀರ್ ನಿವಾಸಿ ಉಮರ್ ಬಶೀರ್ ಭಟ್ ಎಂದು ಗುರುತಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರತೀಯ ಸೇನೆ (52RR) ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (177 BN)ಜತೆ ಸೇರಿ ಭಯೋತ್ಪಾದಕರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಹಿನ್ನೆಲೆ ಪೇತ್ ಸೀರ್ ರೈಲು ನಿಲ್ದಾಣದ ಬಳಿ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಎಲ್‌ಇಟಿ ಭಯೋತ್ಪಾದಕ ಬಂಧಿಸಿದ ಭದ್ರತಾ ಪಡೆ ಆತನಿಂದ ಹ್ಯಾಂಡ್ ಗ್ರೆನೇಡ್, ಪಿಸ್ತೂಲ್, ಪಿಸ್ತೂಲ್ ಮ್ಯಾಗಜೀನ್, 15 ಪಿಸ್ತೂಲ್ ಲೈವ್ ರೌಂಡ್‌ಗಳು ಮತ್ತು ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂಓದಿ:ಅಕ್ರಮ ಹಣ ವರ್ಗಾವಣೆ ಆರೋಪ: ಟಿಎಂಸಿ ನಾಯಕಿ ಅನುಬ್ರತಾ ಪುತ್ರಿ ಸುಕನ್ಯಾ ಮೊಂಡಲ್ ಬಂಧನ..!