ಜಗದಲ್‌ಪುರ/ಬಿಜಾಪುರ: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ಸೋಮವಾರ ಪೊಲೀಸರು ನಡೆಸಿದ ದಾಳಿಯಲ್ಲಿ 10 ಮಂದಿ ಮಾವೋವಾದಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಛತ್ತೀಸ್‌ಗಢದಲ್ಲಿ ಬೃಹತ್ ಸ್ಫೋಟಕ್ಕೆ ಯೋಜಿಸಿದ ಮಾವೋವಾದಿ ನಾಯಕರಿಗೆ ಸಾಗಿಸುತ್ತಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ನಕ್ಸಲರನ್ನು ಸಮ್ಮಯ್ಯ (36), ಅರೆಪಲ್ಲಿ ಶ್ರೀಕಾಂತ್ (23), ಮೇಕಲ ರಾಜು (36), ರಮೇಶ್ (28), ಸಲ್ಲಪಲ್ಲಿ (25), ಮುಚ್ಚಕಿ ರಮೇಶ್ (32), ಸುರೇಶ್ (25), ಲಾಲು (22), ಮಹೇಶ್ (20) ಹಾಗೂ ಮಾವಡಿ ಚೈತು (21) ಎಂದು ಗುರುತಿಸಲಾಗಿದೆ. ಹತ್ತು ಮಂದಿ ಮಾವೋವಾದಿಗಳ ಪೈಕಿ ಐವರು ನಕ್ಸಲರು ತೆಲಂಗಾಣದ ನಿವಾಸಿಗಳಾಗಿದ್ದರೆ ಇನ್ನೂ ಐವರು ಛತ್ತೀಸ್‌ಗಢದ ಬಿಜಾಪುರ ಅವಪಲ್ಲಿ ಪ್ರದೇಶದವರು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಭದ್ರಾಡಿ ಕೊಟ್ಟಗುಡಂ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೃಹತ್ ವಿಧ್ವಂಸಕ ಯೋಜನೆಯನ್ನು ವಿಫಲಗೊಳಿಸಲಾಗಿದೆ. ಬಂಧಿತರಿಂದ ಒಂದು ಟ್ರ್ಯಾಕ್ಟರ್ ಕಾರ್ಡೆಕ್ಸ್ ವೈರ್ ಮತ್ತು ಸುಮಾರು 500 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬೃಹತ್ ಸ್ಫೋಟಕಗಳನ್ನು ಹಾರ್ಡ್‌ಕೋರ್ ನಕ್ಸಲೈಟ್ ನಾಯಕರಿಗೆ ಸಾಗಿಸಲಾಗುತ್ತಿತ್ತು. ಈ ವರ್ಷ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಕೆಲವು ದೊಡ್ಡ ದಾಳಿಗಳನ್ನು ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಡಿ ಭಾಗಗಳಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಸುಳಿವು ನೀಡಿದ ತೆಲಂಗಾಣ ಪೊಲೀಸ್ ತಂಡ ಮುಲಕನಪಲ್ಲಿ ಮತ್ತು ದುಮುಗುಡೆಂಗೆ ಧಾವಿಸಿತು. ಕೊಟ್ಟಗುಡಂ ಮತ್ತು ದುಮುಗುಡೆಂ ಪೊಲೀಸರ ಜಂಟಿ ತಂಡ ಹಾಗೂ ಸಿಆರ್‌ಪಿಎಫ್ 141ನೇ ಸಿಬ್ಬಂದಿ ಸೇರಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಬಂಧಿತರು ಮಾವೋವಾದಿ ಸಂಘಟನೆಯೊಂದಿಗೆ ಸಕ್ರಿಯವಾಗಿ ಸಂಪರ್ಕ ಹೊಂದಿದ್ದಾರೆ ಮತ್ತು ವಿಧ್ವಂಸಕ ಚಟುವಟಿಕೆಗಳಿಗಾಗಿ ವಿವಿಧ ಪ್ರದೇಶಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ತಿಳಿದು ಬಂದಿದೆ.