ನವದೆಹಲಿ:ದೇಶದ ಪ್ರತಿಯೊಂದು ಮಗುವಿಗೆ ಶಿಕ್ಷಣ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮವನ್ನು (ನಿಪುನ್ ಭಾರತ್) ಪ್ರಾರಂಭಿಸಿದೆ. ಕೇಂದ್ರೀಯ ಪ್ರಾಯೋಜಿತ ‘ಸಮಗ್ರ ಶಿಕ್ಷಾ’ ಯೋಜನೆ ಆಶ್ರಯದಲ್ಲಿ ಪ್ರಾರಂಭಿಸಲಾಗಿರುವ ಈ ಮಿಷನ್, ಶಿಕ್ಷಣ, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಶಿಕ್ಷಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಕಲಿಕಾ ಸಾಮಗ್ರಿಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತದೆ.
ಈ ಯೋಜನೆ ಕುರಿತು ಮಾತನಾಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ‘ನಿಪುನ್ ಭಾರತ್’ 3 ರಿಂದ 9 ವರ್ಷದ ಮಕ್ಕಳ ಕಲಿಕೆಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ. ಭಾಷೆ, ಸಾಕ್ಷರತೆ ಮತ್ತು ಸಂಖ್ಯಾ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಶಿಕ್ಷಕರು ಪ್ರತಿ ಮಗುವಿನತ್ತ ಗಮನಹರಿಸಬೇಕಿದೆ. ಇದರಿಂದಾಗಿ ಮಕ್ಕಳು ಹೆಚ್ಚಿನ ಕಲಿಕೆಯಲ್ಲಿ ತೊಡಗಲಿದ್ದಾರೆ. ನಿಪುನ್ ಭಾರತ್ ಪ್ರಾಥಮಿಕ ಹಂತದಲ್ಲಿ ಕಲಿಕೆಯ ಅನುಭವವನ್ನು ಸಮಗ್ರ, ಅಂತರ್ಗತ ಮತ್ತು ಆಕರ್ಷಕವಾಗಿ ಮಾಡಲು ಉದ್ದೇಶಿಸಿದೆ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಉಲ್ಲೇಖಿಸಿದ ಸಚಿವರು, ಎಲ್ಲಾ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವುದು ರಾಷ್ಟ್ರೀಯ ಮಿಷನ್ನ ಸದುದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡೇ ಇಲಾಖೆಯು ನಿಪುನ್ ಭಾರತ್ನ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿ ಪಡಿಸಿದೆ. ತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.