ಮುಂಬೈ:ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ಪ್ಲಾಟ್ಫಾರ್ಮ್ನಿಂದ ಹಳಿ ಮೇಲೆ ಬಿದ್ದಿದ್ದ ಮಗುವೊಂದನ್ನ ರೈಲ್ವೆ ಸಿಬ್ಬಂದಿಯೊರ್ವ ಕಾಪಾಡಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಧೈರ್ಯ ಮೆಚ್ಚಿ ರೈಲ್ವೆ ಸಚಿವಾಲಯ 50 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿತ್ತು.
ಇದೀಗ ತನಗೆ ನೀಡಿರುವ ಹಣದಲ್ಲಿ ಅರ್ಧದಷ್ಟು ಮಗುವಿನ ಕುಟುಂಬಕ್ಕೆ ನೀಡಲು ಆ ರೈಲ್ವೆ ಸಿಬ್ಬಂದಿ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಘೋಷಣೆ ಸಹ ಮಾಡಿದ್ದಾರೆ.
ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ಪಾರ್ಮ್ನಲ್ಲಿ ಮಹಿಳೆ ಹಾಗೂ ಮಗು ನಡೆದುಕೊಂಡು ಹೋಗ್ತಿದ್ದ ವೇಳೆ ಆಯ ತಪ್ಪಿ ಮಗು ರೈಲ್ವೆ ಹಳಿ ಮೇಲೆ ಬಿದ್ದಿತ್ತು. ಈ ವೇಳೆ ಎದುರಿನಿಂದ ರೈಲು ಆಗಮಿಸುತ್ತಿತ್ತು. ಕೆಲವೇ ಕ್ಷಣಾರ್ಧದಲ್ಲಿ ರೈಲು ಮಗುವಿನ ಮೇಲೆ ಹಾಯ್ದುಹೋಗಬೇಕು ಎನ್ನುವಷ್ಟರಲ್ಲಿ ಮುಂಬೈ ವಿಭಾಗದ ರೈಲ್ವೆ ಸಿಬ್ಬಂದಿ(ಪಾಯಿಂಟ್ಮ್ಯಾನ್) ಮಯೂರ್ ಅದರ ರಕ್ಷಣೆ ಮಾಡಿ, ಮಗುವಿನ ಪಾಲಿಗೆ ದೇವರಾಗಿದ್ದರು. ಈ ವಿಡಿಯೋ ಎಲ್ಲಡೆ ವೈರಲ್ ಕೂಡಾ ಆಗಿತ್ತು.
ಇದನ್ನೂ ಓದಿ:ರೈಲ್ವೆ ಪ್ಲಾಟ್ ಫಾರ್ಮ್ನಿಂದ ಹಳಿ ಮೇಲೆ ಬಿದ್ದ ಮಗುವನ್ನ ದೇವರಂತೆ ಕಾಪಾಡಿದ ಸಿಬ್ಬಂದಿ!
ಇವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ ರೈಲ್ವೆ ಇಲಾಖೆ 50 ಸಾವಿರ ರೂ. ನಗದು ಘೋಷಣೆ ಮಾಡಿತ್ತು. ಅದರಲ್ಲಿ ಅರ್ಧ ಹಣ ಮಗುವಿನ ಶಿಕ್ಷಣಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮಯೂರ್ಗೆ ಮಹೀಂದ್ರಾ ಕಂಪನಿ ಜಾವಾ ಬೈಕ್ ನೀಡುವುದಾಗಿ ಘೋಷಣೆ ಮಾಡಿದೆ. ಇನ್ನು ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಯಿ ಕುರುಡಿಯಾಗಿದ್ದು, ಆಕೆಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿತ್ತು.