ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ನ್ಯಾಯಾಲಯದ ಗುಮಾಸ್ತ (ಕ್ಲರ್ಕ್) ಎರಡು ತಿಂಗಳ ಹಿಂದೆ ಬಂಧನಕ್ಕೊಳಗಾದ ಅತ್ಯಾಚಾರ ಪ್ರಕರಣದ ಆರೋಪಿಯ ಬಿಡುಗಡೆಗಾಗಿ ನಕಲಿ ಜಾಮೀನು ಆದೇಶ ಪತ್ರವನ್ನು ಸೃಷ್ಟಿರುವುದು ವರದಿಯಾಗಿದೆ.
ನಕಲಿ ಜಾಮೀನಿನ ಮೇಲೆಯೇ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ನರೇಂದ್ರ ಸಚನ್ ಎಂಬಾತ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಅಲ್ಲದೇ, ಆರೋಪಿ ಸಂತ್ರಸ್ತೆ ಮನೆಗೆ ಹೋಗಿ ಆಕೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ತನ್ನ ವಿರುದ್ಧ ನೀಡಿರುವ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಆರೋಪಿ ಹೆದರಿಸಿದ್ದಾನೆ. ಇದರಿಂದ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಯ ಕುರಿತು ಮತ್ತೆ ಪೊಲೀಸರು ಮೊರೆ ಹೋಗಿದ್ದಾರೆ. ಆಗ ಆರೋಪಿ ನಕಲಿ ಜಾಮೀನಿನ ಮೇಲೆ ಹೊರಬಂದಿರುವುದು ಬೆಳಕಿಗೆ ಬಂದಿದೆ.
ಜಾಮೀನು ತಿರಸ್ಕಾರವಾದರೂ ಹೊರಬಂದಿದ್ದ!: ಆರೋಪಿ ನರೇಂದ್ರ ಸಚನ್ ಜೂನ್ 16ರಂದು ತನ್ನ ನೆರೆಮನೆಯ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿ ಕುಟುಂಬಸ್ಥರು ಕೆಲಸಕ್ಕೆಂದು ಹೊರಗಡೆ ಹೋದಾಗ ಒಬ್ಬಳೇ ಇರುವ ಸಮಯ ನೋಡಿಕೊಂಡು ದುಷ್ಕೃತ್ಯ ಎಸಗಿದ್ದ. ಸಂತ್ರಸ್ತೆಯ ತಂದೆಯ ವಿಚಾರಿಸುವ ನೆಪ ಮಾಡಿಕೊಂಡು ಮನೆಗೆ ನುಗ್ಗಿದ್ದ. ನಂತರ ಪೋಷಕರು ಮನೆಗೆ ಮರಳಿದಾಗ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು ಬೆಳಕಿಗೆ ಬಂದಿತ್ತು.