ಕಾಜಿರಂಗ (ಅಸ್ಸಾಂ): ಅಸ್ಸಾಂ ಏಕ ಕೊಂಬಿನ ಘೇಂಡಾಮೃಗ ಪ್ರಾಣಿ ಹೊಂದಿದ್ದು, ಈ ಕಾರಣಕ್ಕೆ ರಾಜ್ಯ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೇ ಇಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಏಕ ಕೊಂಬಿನ ಘೇಂಡಾಮೃಗದ ಕೇಂದ್ರ ಎಂದೇ ಗುರುತಿಸಿಕೊಂಡಿದೆ. ಆದರೆ ರಾಜ್ಯವು ಹಲವು ದಶಕಗಳಿಂದ ಘೇಂಡಾಮೃಗಗಳ ಬೇಟೆಗಾರರಿಂದ ದೊಡ್ಡ ಸಮಸ್ಯೆಯನ್ನೇ ಎದುರಿಸುತ್ತಿದೆ. ಕಳೆದ ವರ್ಷ ಸರ್ಕಾರದ ದಾಖಲೆಗಳ ಪ್ರಕಾರ, ಒಂದೇ ಒಂದು ಕಳ್ಳಬೇಟೆ ನಡೆದಿಲ್ಲ. ಆದರೆ ಈ ವರ್ಷ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗರಿ ವ್ಯಾಪ್ತಿಯಲ್ಲಿ ಕಳ್ಳಬೇಟೆಯ ಮೊದಲ ಪ್ರಕರಣ ದಾಖಲಾಗಿದೆ.
ಕೊಂಬಿಗಾಗಿ ಹತ್ಯೆ: ಭಾನುವಾರದಂದು ರಾಷ್ಟ್ರೀಯ ಉದ್ಯಾನವನದ ಬಗರಿ ವ್ಯಾಪ್ತಿಯ ಕತ್ಪಾರಾ ಅರಣ್ಯ ಶಿಬಿರದ ಬರ್ಮಾ ಬೀಲ್‌ನಲ್ಲಿ ಒಂದು ಸಾವನ್ನಪ್ಪಿದ ಘೇಂಡಾಮೃಗದ ದೇಹವನ್ನು ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಬೇಟೆಗಾರರು ಕೊಂಬಿನ ಆಸೆಗಾಗಿ ಪ್ರಾಣಿಯನ್ನು ಕೊಂದು ಹಾಕಿರುವ ಶಂಕೆಯನ್ನು ಅರಣ್ಯ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ. 4 ರಿಂದ 5 ದಿನಗಳ ಹಿಂದೆಯೇ ಘೇಂಡಾಮೃಗವನ್ನು ಕೊಂದು ಹಾಕಿರುವಂತೆ ಕಾಣುತ್ತಿದ್ದು, 2018 ರ ನಂತರ ಬಗರಿ ವ್ಯಾಪ್ತಿಯಲ್ಲಿ ನಡೆದ ಬೇಟೆಯ ಮೊದಲ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ರಮೇಶ್ ಕುಮಾರ್ ಗೊಗೊಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಅರಬ್ ರಾಜಕುಮಾರ 10 ವರ್ಷದ ಹಿಂದೆ ಉಡುಗೊರೆಯಾಗಿ ನೀಡಿದ್ದ ಏಕೈಕ ಚೀತಾ ಸಾವು