ನವದೆಹಲಿ: ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಉಲ್ಬಣ ಕುರಿತ ವರದಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಸನ್ನದ್ಧತೆಯನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ. ಉಸಿರಾಟದ ಕಾಯಿಲೆಗಳ ಬಗ್ಗೆ ಪೂರ್ವಸಿದ್ಧತಾ ಕ್ರಮಗಳನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸದ್ಯಕ್ಕೆ ವರದಿಯಾಗುತ್ತಿರುವ ಇನ್ಫ್ಲುಯೆಂಜಾ ಮತ್ತು ಚಳಿಗಾಲದ ಕಾರಣದ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದನ್ನು ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆವನ್ನು ತಕ್ಷಣವೇ ಪರಿಶೀಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಇನ್ಫ್ಲುಯೆಂಜಾಕ್ಕೆ ಸಂಬಂಧಿಸಿದಂತೆ ಬೆಡ್ಗಳು, ಔಷಧಗಳು ಮತ್ತು ಲಸಿಕೆಗಳ ಲಭ್ಯತೆ, ವೈದ್ಯಕೀಯ ಆಮ್ಲಜನಕ, ರಕ್ಷಣಾ ಸಾಧನಗಳು, ಪರೀಕ್ಷಾ ಕಿಟ್‌ಗಳು ಮತ್ತು ಕಾರಕಗಳು, ಆಮ್ಲಜನಕ ಘಟಕಗಳ ಮತ್ತು ವೆಂಟಿಲೇಟರ್‌ಗಳ ಕಾರ್ಯ ಹಾಗೂ ಸೋಂಕು ನಿಯಂತ್ರಣ ಕುರಿತು ಆಸ್ಪತ್ರೆಗಳ ಸನ್ನದ್ಧತೆ ಬಗ್ಗೆ ಸೂಚನೆ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಇನ್ಫ್ಲುಯೆಂಜಾದಂತಹ ಅನಾರೋಗ್ಯ (ILI) ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ (SARI) ಕುರಿತು ಪರಿಷ್ಕೃತ ನಿಗಾ ಕಾರ್ಯತಂತ್ರಕ್ಕಾಗಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.