ಫಿರೋಜ್ಪುರ್(ಪಂಜಾಬ್):ಪ್ರಧಾನಿ ನರೇಂದ್ರ ಮೋದಿ ಎದುರಿಸಿದ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ಇದರ ಬೆನ್ನಲ್ಲೇ ಪಂಜಾಬ್ ಡಿಜಿಪಿ ಸೇರಿದಂತೆ 14 ಉನ್ನತಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ 24 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.
ಫಿರೋಜ್ಪುರ್ನಲ್ಲಿ ಪ್ರಧಾನಿ ಮೋದಿ ಎದುರಿಸಿರುವ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ತಂಡ ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಸೇರಿ ಐದು ಜಿಲ್ಲೆಯ 13 ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಫ್ಲೈ ಓವರ್ನಲ್ಲಿ ಪ್ರಧಾನಿ ಮೋದಿ ತೆರಳುತ್ತಿದ್ದ ರಸ್ತೆಗೆ ಅಡ್ಡಿಪಡಿಸಿರುವ 150 ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ.
ಇದನ್ನೂ ಓದಿ:'ಕೇಂದ್ರದ ಗಿಣಿ': ಕ್ಯಾ.ಅಮರೀಂದರ್ ವಿರುದ್ಧ ಸಿಧು ವಾಗ್ದಾಳಿ
ಘಟನೆಗೆ ಸಂಬಂಧಿಸಿದಂತೆ ಫಿರೋಜ್ಪುರ್ ಸಮೀಪದ ಕುಲ್ಗರ್ಹಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಕೇಂದ್ರದ ತ್ರಿಸದಸ್ಯ ಸಮಿತಿಯಿಂದ ತನಿಖೆ ಆರಂಭಗೊಂಡಿದೆ. ಕೇಂದ್ರ ಸಂಪುಟ ಸಚಿವಾಲಯದ ಕಾರ್ಯದರ್ಶಿ ಸುಧೀರ್ ಕುಮಾರ್ ಸಕ್ಸೇನಾ ನೇತೃತ್ವದ ಸಮಿತಿಯಲ್ಲಿ ಗುಪ್ತಚರ ಇಲಾಖೆ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಹಾಗೂ ವಿಶೇಷ ರಕ್ಷಣೆ ಐಜಿ ಎಸ್ ಸುರೇಶ್ ಇದರಲ್ಲಿ ಇದ್ದಾರೆ.
ರಾಜ್ಯ ಸರ್ಕಾರದಿಂದಲೂ ತನಿಖೆ ನಡೆಯುತ್ತಿದ್ದು, ಈಗಾಗಲೇ ಪ್ರಾಥಮಿಕ ವರದಿ ಕೇಂದ್ರಕ್ಕೆ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ನಲ್ಲೂ ಇದರ ವಿಚಾರಣೆ ಆರಂಭಗೊಂಡಿದ್ದು, ಪ್ರಕರಣ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಪಂಜಾಬ್ನ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ರ್‍ಯಾಲಿ ರದ್ದುಗೊಳಿಸಲಾಗಿತ್ತು. ಈ ಪ್ರಕರಣ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.