ನವದೆಹಲಿ:ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಲ್ಲಿ ಕೋವಿನ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕಲಾಗುತ್ತದೆ.
ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪಿಎಂ ಮೋದಿಯ ಫೋಟೋ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯವು ಟ್ಯಾಬ್ ಅನ್ನು ಇರಿಸುತ್ತದೆ. ಇದರಿಂದ ಪ್ರಧಾನಿಯವರ ಚಿತ್ರ ಕಾಣಿಸುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 'ಮಾದರಿ ನೀತಿ ಸಂಹಿತೆ' ಜಾರಿಗೆ ಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಕಾಶಿ ವಿಶ್ವನಾಥ ಧಾಮದ ಕೆಲಸಗಾರರಿಗೆ ಸೆಣಬಿನ 100 ಜೋಡಿ ಪಾದರಕ್ಷೆಗಳನ್ನು ಕಳುಹಿಸಿದ ಪ್ರಧಾನಿ ಮೋದಿ
ಇದಕ್ಕೂ ಮೊದಲೇ, ಅಂದರೆ 2021ರ ಮಾರ್ಚ್ನಲ್ಲಿ ವಿರೋಧ ಪಕ್ಷಗಳು ಕೋವಿನ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಭಾವಚಿತ್ರವನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದವು. ಹೀಗಾಗಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಆ ಸಮಯದಲ್ಲಿ ವಿಧಾನಸಭಾ ಚುನಾವಣೆ ನಡೆದ ಅಸ್ಸೋಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ ಮೋದಿ ಫೋಟೋ ತೆಗೆದುಹಾಕಲಾಗಿತ್ತು.