ನವದೆಹಲಿ: ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್(ವಿಜಿಐಆರ್) ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದು, ದಿಗ್ಗಜ ಹೂಡಿಕೆದಾರರು ಹಾಗೂ ಕಂಪನಿ ಸಂಸ್ಥಾಪಕರು ಭಾಗಿಯಾಗಲಿದ್ದಾರೆ.
ಈ ಸಮಾವೇಶವನ್ನು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲ ಸೌಕರ್ಯ ನಿಧಿ ಜಂಟಿಯಾಗಿ ಆಯೋಜಿಸಲಿವೆ. ಇದು ಜಾಗತಿಕ ಮಟ್ಟದ ಹೂಡಿಕೆದಾರರು, ಭಾರತೀಯ ಮಾರುಕಟ್ಟೆ ವಲಯದ ದಿಗ್ಗಜರು, ಸರ್ಕಾರದಲ್ಲಿ ಪ್ರಮುಖ ನಿರ್ಧಾರಗಳ ನಿರ್ಮಾತೃಗಳು, ಹಣಕಾಸು ಮಾರುಕಟ್ಟೆಯ ನಿಯಂತ್ರಕರ ನಡುವಿನ ದೊಡ್ಡ ಸಂವಾದವಾಗಿರಲಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಇವರಷ್ಟೇ ಅಲ್ಲದೆ ಜಾಗತಿಕ ಹೂಡಿಕೆಯ ಪಾಲುದಾರರಾದ ಯುಎಸ್, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದೊಂದಿಗೆ ಹೂಡಿಕೆ ಮಾಡಲು ಮುಂದಾಗುವ ಹಲವು ಸಿಇಒ ಹಾಗೂ ಸಿಐಒಗಳು ಈ ಸಮಾವೇಶದಲ್ಲಿ ಉಪಸ್ಥಿತರಿರಲಿದ್ದಾರೆ. ಇವರ ಜೊತೆ ಭಾರತದ ಹೆಸರಾಂತ ಹೂಡಿಕೆದಾರರು ಸಹ ಭಾಗವಹಿಸಲಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್, ರತನ್ ಟಾಟಾ, ಮುಖೇಶ್ ಅಂಬಾನಿ, ನಂದನ್ ನಿಲೇಕಣಿ, ದೀಪಕ್ ಪರೇಖ್, ಉದಯ್ ಕೊಟಕ್ ಮತ್ತು ದಲೀಪ್ ಸಂಘ್ವಿ ಈ ರೌಂಡ್ ಟೇಬಲ್ ಸಮಾವೇಶದಲ್ಲಿ ಭಾಗಿಯಾಗಿ, ಹೂಡಿಕೆಯಲ್ಲಿ ಭಾರತದ ದೃಷ್ಟಿಕೋನ ಕುರಿತು ಸಂವಾದ ನಡೆಸಲಿದ್ದಾರೆ ಎಂದಿದ್ದಾರೆ.
ಈ ಈವೆಂಟ್ ಭಾರತದ ಆರ್ಥಿಕ ಮತ್ತು ಹೂಡಿಕೆಯ ದೂರದೃಷ್ಟಿ, ರಚನಾತ್ಮಕ ಸುಧಾರಣೆಗಳು ಮತ್ತು ಭಾರತ 5 ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಹಾದಿಯ ಕುರಿತ ಚರ್ಚೆಯ ಮೇಲೆ ಕೇಂದ್ರೀಕೃತವಾಗಿದೆ.