ಬೋಲ್ಪುರ್ (ಪಶ್ಚಿಮ ಬಂಗಾಳ): ಬಂಗಾಳದ ಅತಿದೊಡ್ಡ ಹಬ್ಬ ದುರ್ಗಾ ಪೂಜೆ ಕುರಿತು ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ನೀಡಿದ್ದ ವಿವಾದಿತ ಹೇಳಿಕೆ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯವು (ಪಿಎಂಒ) ಶಾಂತಿನಿಕೇತನ ಟ್ರಸ್ಟ್‌ನಿಂದ ವರದಿ ಕೇಳಿದೆ.
ಫೆಬ್ರವರಿ 22ರಂದು ಸಾಂಪ್ರದಾಯಿಕ ಉಪಾಸನಾ ಗೃಹದಲ್ಲಿ ಮಾತನಾಡಿದ್ದ ಬಿದ್ಯುತ್ ಚಕ್ರವರ್ತಿ, ''ಇಂದು ದುರ್ಗಾಪೂಜೆಯು ಪ್ರಪಂಚದ ಪೂಜೆಗಳಲ್ಲಿ ಒಂದಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೆ, ನೀವು ದುರ್ಗಾ ಪೂಜೆಯ ಇತಿಹಾಸವನ್ನು ನೋಡಿದರೆ, ಈ ದುರ್ಗಾ ಪೂಜೆಯು ಬ್ರಿಟಿಷರ ಬೂಟುಗಳನ್ನು ನೆಕ್ಕಲು ಪ್ರಾರಂಭಿಸಲಾಗಿತ್ತು'' ಎಂದು ವಿವಾದಿತ ಹೇಳಿಕೆ ನೀಡಿದ್ದರು.
ಮುಂದುವರೆದು, ''ಆಂಗ್ಲ ಸಾಹೇಬರನ್ನು ದುರ್ಗಾಪೂಜೆಯ ವೇದಿಕೆಗೆ ಕರೆ ತರಲು ಅಂದಿನ ರಾಜರ ನಡುವೆ ಪೈಪೋಟಿ ಇತ್ತು. ದುರ್ಗಾ ವೇದಿಕೆಯಲ್ಲಿ ಹಲವಾರು ರೀತಿಯ ಪಾನೀಯಗಳನ್ನು ನೀಡಲಾಗುತ್ತಿತ್ತು. ಅನೇಕ ರೀತಿಯ ಪಾನೀಯಗಳು ಸಹ ಪೂಜೆ ಸಂದರ್ಭದಲ್ಲಿ ಲಭ್ಯ ಇರುತ್ತಿದ್ದವು. ನಂತರ ದುರ್ಗಾ ಪೂಜೆ ಧಾರ್ಮಿಕ ಕಾರ್ಯಕ್ರಮವಾಯಿತು. ಆದರೆ, ಇದು ಮೂಲ ಉದ್ದೇಶವು ಬ್ರಿಟಿಷರನ್ನು ಮೆಚ್ಚಿಸುವುದಾಗಿತ್ತು'' ಎಂದು ತಿಳಿಸಿದ್ದರು.
ಶಾಂತಿನಿಕೇತನ ಟ್ರಸ್ಟ್ ಖಂಡನೆ: ನಿರಾಕಾರ ಬ್ರಹ್ಮ ದೇಗುಲ ಮತ್ತು ಸರ್ವಧರ್ಮೀಯರ ಸಾಂಪ್ರದಾಯಿಕ ಆರಾಧನಾ ಸ್ಥಳದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಉಪಕುಲಪತಿ ನೀಡಿದ್ದ ಹೇಳಿಕೆಗೆ ಖುದ್ದು ಶಾಂತಿನಿಕೇತನ ಟ್ರಸ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಮಾರ್ಚ್ 10ರಂದು ಟ್ರಸ್ಟ್ ಕಾರ್ಯದರ್ಶಿ ಅನಿಲ್ ಕೋನಾರ್ ಅವರು ವಿಶ್ವಭಾರತಿ ಕುಲಪತಿಗಳಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೂರು ನೀಡಿದ್ದರು.
ಅಲ್ಲದೇ, ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ಪೂಜಾ ಮಂದಿರದಲ್ಲಿ ಕುಳಿತು ಯತಿಗಳು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ದೂರ ದಾಖಲಾಗಿತ್ತು. ಪ್ರಾರ್ಥನಾ ಸ್ಥಳದ ವೇದಿಕೆಯನ್ನು ಬಳಸಿಕೊಂಡು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವುದು ಮತ್ತು ದುರ್ಗಾ ಪೂಜೆ ಸಂಪ್ರದಾಯದ ಬಗ್ಗೆ ಹೇಳಿಕೆ ಮಾಡುವುದು ಸೂಕ್ತವಲ್ಲ ಎಂದು ಶಾಂತಿನಿಕೇತನ ಟ್ರಸ್ಟ್ ಖಂಡಿಸಿತ್ತು. ಇದೀಗ ಟ್ರಸ್ಟ್‌ನಿಂದ ದೂರನ್ನು ಸ್ವೀಕರಿಸಿದ ಪ್ರಧಾನಿ ಕಾರ್ಯಾಲಯವು ಹಂಗಾಮಿ ಕಾರ್ಯದರ್ಶಿ ಅಶೋಕ್ ಮಹತೋ ಅವರಿಂದ ವರದಿಯನ್ನು ಕೋರಿದೆ.
ವಿಶ್ವಭಾರತಿ ವಿಶ್ವವಿದ್ಯಾಲಯದ ಬಗ್ಗೆ...ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ್ ಟ್ಯಾಗೋರ್ 1921ರಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದರು. 1951ರಲ್ಲಿ ಸಂಸತ್ತಿನ ಕಾಯ್ದೆ ಮೂಲಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಯಿತು. ರಾಷ್ಟ್ರಪತಿ ವಿಶ್ವವಿದ್ಯಾಲಯದ ಪರಿದರ್ಶಕ (Visitor), ಪಶ್ಚಿಮ ಬಂಗಾಳದ ರಾಜ್ಯಪಾಲರು ಪ್ರಧಾನ (Rector) ಮತ್ತು ಭಾರತದ ಪ್ರಧಾನ ಮಂತ್ರಿ ಆಚಾರ್ಯ (Chancellor) ಆಗಿ ಕಾರ್ಯನಿರ್ವಹಿಸುತ್ತಾರೆ. ರಾಷ್ಟ್ರಪತಿಗಳು ವಿಶ್ವವಿದ್ಯಾಲಯದ ಉಪಾಚಾರ್ಯರನ್ನು (Vice-chancellor) ನೇಮಿಸುತ್ತಾರೆ.
ಇತ್ತೀಚೆಗೆ ಭೂ ವಿವಾದ ಸಂಬಂಧ ವಿಶ್ವಭಾರತಿ ವಿಶ್ವವಿದ್ಯಾಲಯವು ಹೆಚ್ಚು ಚರ್ಚೆಗೆ ಬಂದಿತ್ತು. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ವಿಶ್ವವಿದ್ಯಾಲಯದ ಒಡೆತನದ ಸುಮಾರು 13 ದಶಮಾಂಶ (ಡೆಸಿಮಲ್) ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ, ವಿಶ್ವವಿದ್ಯಾಲಯದಿಂದ ಅಮರ್ತ್ಯ ಸೇನ್ ಅವರಿಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ:ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ