ನವದೆಹಲಿ:ಈ ಹಿಂದೆಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಧೀರ್ ಪರ್ಮಾರ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ನ್ಯಾಯಾಧೀಶ ಸುಧೀರ್ ಪರ್ಮಾರ್ ಲಂಚ ಆರೋಪದಡಿ ಅಮಾನತುಗೊಂಡಿದ್ದರು. ಇದೀಗ ಪರ್ಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕುರಿತಾದ ತನಿಖೆಗಾಗಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಪರ್ಮಾರ್ ಅವರನ್ನು ದೆಹಲಿಯ ಪಕ್ಕದ ಗುರುಗ್ರಾಮದಲ್ಲಿರುವ ಏಜೆನ್ಸಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ನಂತರ ಮಾಜಿ ನ್ಯಾಯಧೀಶರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ.
ತನಿಖೆಗಾಗಿ ಕಸ್ಟಡಿಗೆ ತೆಗೆದುಕೊಂಡಿರುವ ಸುಧೀರ್ ಪರ್ಮಾರ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಹಾಗೆ ಮಾಜಿ ನ್ಯಾಯಧೀಶರನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಇಡಿ ಕೋರುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೇ, ಇಡಿ ಬಂಧನಕ್ಕೂ ಮುನ್ನ 2 ಬಾರಿ ಏಜೆನ್ಸಿ ಅವರನ್ನ ವಿಚಾರಣೆಗಾಗಿ ಕರೆದಿತ್ತು. ನಿನ್ನೆಯ ವಿಚಾರಣೆಗ ಮೂರನೇಯದ್ದಾಗಿತ್ತು. ಮತ್ತು ನ್ಯಾಯಾಧೀಶ ಸುಧೀರ್ ಪರ್ಮಾರ್ ಅವರನ್ನು ಬಂಧಿಸಲು ಹರಿಯಾಣ ಕೋರ್ಟ್ ಮತ್ತು ಪಂಜಾಬ್ ಕೋರ್ಟ್ನಿಂದ ಇಡಿ ಅನುಮತಿ ಪಡೆದುಕೊಂಡಿತ್ತು.
ಪರ್ಮಾರ್ ಅವರಷ್ಟೆ ಅಲ್ಲದೇ, ಈ ಪ್ರಕರಣದಲ್ಲಿ ಅವರ ಸೋದರಳಿಯ ಅಜಯ್ ಪರ್ಮಾರ್, ರಿಯಲ್ ಎಸ್ಟೇಟ್ ಕಂಪನಿಯ ಇಬ್ಬರು ಬೆಂಬಲಿಗರಾದ - ಬಸಂತ್ ಬನ್ಸಾಲ್ ಮತ್ತು ಅವರ ಮಗ ಪಂಕಜ್ ಬನ್ಸಾಲ್ ಮತ್ತು ಮಗದೊಂದು ರಿಯಲ್ ಎಸ್ಟೇಟ್ ಕಂಪನಿಯ ಗುಂಪಿನ ಮಾಲೀಕ ಮತ್ತು ಎಮ್ಡಿ ಲಲಿತ್ ಗೋಯಲ್ ಅವರನ್ನು ಈಗಾಗಲೇ ಇಡಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.