ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳು ಜರ್ಮನಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 26 ಮತ್ತು 27ರಂದು ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ಅಲ್ಲಿ ನಡೆಯುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂನ್ 28ರಂದು ಯುಎಇಗೆ ಭೇಟಿ ನೀಡಲಿದ್ದಾರೆ.
ಜಿ-7 ಶೃಂಗಸಭೆಗಾಗಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಲ್ಲಿನ ಸ್ಕ್ಲೋಸ್ ಎಲ್ಮೌಗೆ ತೆರಳುತ್ತಿದ್ದಾರೆ. ಈ ಸಮಯದಲ್ಲಿ ಎರಡು ಅಧಿವೇಶನಗಳಲ್ಲಿ ಪ್ರಧಾನಿ ಮಾತನಾಡುವ ನಿರೀಕ್ಷೆಯಿದೆ. ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ವಿಷಯದ ಬಗ್ಗೆ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಜಿ-7 ಶೃಂಗಸಭೆಗೆ ಆಹ್ವಾನಿಸಲಾಗಿದೆ. ಇದರ ಹೊರತಾಗಿ ಪ್ರಧಾನಿ ಕೆಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ಸಹ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಪ್ರಧಾನಿ ಕಚೇರಿ ಹೇಳಿದೆ.