ಅಹಮದಾಬಾದ್ (ಗುಜರಾತ್):ಕೇಂದ್ರ ಸರ್ಕಾರದ ಲೈಟ್ ಹೌಸ್ ಪ್ರಾಜೆಕ್ಟ್ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿರ್ಮಿಸಲಾಗುವ 1,144 ಮನೆಗಳ ಕಾಮಗಾರಿಗೆ ಪ್ರಧಾನಿ ಮೋದಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದ್ದು ಮಾತ್ರವಲ್ಲದೇ ಸ್ವತಃ ಪ್ರಧಾನ ಮಂತ್ರಿಗಳೇ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:'ಕೊರೊನಾ ವಾರಿಯರ್ಗಳನ್ನ ನೆನೆಯುವ ವರ್ಷದ ಕೊನೆ ದಿನ': ಏಮ್ಸ್ ಶಂಕುಸ್ಥಾಪನೆ ಬಳಿಕ ಮೋದಿ ಮಾತು
2021ರ ಮೊದಲ ದಿನ, ನಗರ ಯೋಜನೆಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದು, ಲೈಟ್ ಹೌಸ್ ಪ್ರಾಜೆಕ್ಟ್ಗಳಿಗೆ ಶಂಕು ಸ್ಥಾಪನೆ ಮತ್ತು ಪಿಎಂಎವೈ (ನಗರ) ಮತ್ತು ಆಶಾ-ಇಂಡಿಯಾ ಪ್ರಶಸ್ತಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಜರಾಗಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಎಲ್ಎಚ್ಪಿ ಯೋಜನೆಯಡಿ ಕೇಂದ್ರ ಸರ್ಕಾರವು ಇಂಧೋರ್, ಚೆನ್ನೈ, ರಾಂಚಿ, ಅಗರ್ತಲಾ, ಲಕ್ನೋ ಮತ್ತು ರಾಜ್ಕೋಟ್ ನಗರಗಳಲ್ಲಿ ತಲಾ 1,000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಿದೆ. ಇವುಗಳನ್ನು ಆರ್ಥಿಕವಾಗಿ ಹಿಂದುಳಿದವರರಿಗೆ ವಿತರಣೆ ಮಾಡಲಾಗುತ್ತದೆ.