ಅಹಮದಾಬಾದ್: ನವೀಕರಣಗೊಂಡ ಗಾಂಧಿನಗರ ರೈಲ್ವೆ ನಿಲ್ದಾಣದ ಮೇಲೆ ಹೊಸದಾಗಿ ನಿರ್ಮಿಸಲಾಗಿರುವ ಪಂಚತಾರಾ ಹೋಟೆಲ್ ಮತ್ತು ಇತರ ಬಿಗ್ ಟಿಕೆಟ್ ಯೋಜನೆಗಳನ್ನು ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
ಗಾಂಧಿನಗರದಲ್ಲಿ ಈಗ ಇರುವ ರೈಲ್ವೆ ನಿಲ್ದಾಣದ ನವೀಕರಣ ಮತ್ತು ನಿಲ್ದಾಣದ ಮೇಲ್ಭಾಗದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣ 2017 ರ ಜನವರಿಯಲ್ಲಿ ಪ್ರಾರಂಭವಾಯಿತು, ಇದೀಗ ಉದ್ಘಾಟನೆಗೆ ಸಿದ್ದವಾಗಿದೆ. ಜುಲೈ 16 ರಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಕಾಮಗಾರಿ ಉದ್ಘಾಟಿಸಲಿದ್ದಾರೆ ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.
ಪಂಚತಾರ ಹೋಟೆಲ್ :ಒಟ್ಟು 318 ಕೊಠಡಿಗಳನ್ನು ಹೊಂದಿರುವ ನೂತನ ಹೋಟೆಲ್ ಅನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡಲಿದೆ. ಈ ಐಷಾರಾಮಿ ಹೋಟೆಲ್ 7,400 ಚದರ ಮೀಟರ್ ವಿಸ್ತಾರ ಹೊಂದಿದೆ ಮತ್ತು 790 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಹೋಟೆಲ್ ದೇಶ, ವಿದೇಶಗಳ ಅತಿಥಿಗಳಿಗೆ ಆತಿಥ್ಯ ನೀಡಲಿದೆ. ಹೋಟೆಲ್ಗೆ ಬರುವ ಅತಿಥಿಗಳು ಅಲ್ಲಿಯೇ ಎದುರುಗಡೆ ಇರುವ ಮಹಾತ್ಮ ಮಂದಿರದಲ್ಲಿ ಸೆಮಿನಾರ್ ಮತ್ತು ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬಹುದು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಗುಜರಾತ್ ಸಿಎಂ ವಿಜಯ್ ರೂಪಾಣಿ ಸೇರಿದಂತೆ ಅನೇಕ ಗಣ್ಯರು ವರ್ಚುಯಲ್ ವೇದಿಕೆ ಮೂಲಕ ಪಾಲ್ಗೊಳ್ಳಲಿದ್ದಾರೆ. ಬಳಿಕ ಪ್ರಧಾನಿ ಅಹಮದಾಬಾದ್ನ ಸೈನ್ಸ್ ಸಿಟಿಯಲ್ಲಿ ಅಕ್ವಾಟಿಕ್ ಗ್ಯಾಲರಿ, ರೋಬೋಟ್ ಗ್ಯಾಲರಿ ಮತ್ತು ನೇಚರ್ ಪಾರ್ಕ್ ಸೇರಿದಂತೆ ಮೂರು ಆಕರ್ಷಣೀಯ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.