ನವದೆಹಲಿ:ಉತ್ತರ ಪ್ರದೇಶ ವಿಧಾನಸಭೆಗೆ ಕೆಲ ದಿನಗಳಲ್ಲೇ ಚುನಾವಣೆ ನಡೆಯಲಿದ್ದು, ಸಾರ್ವಜನಿಕ ಸಭೆ ರದ್ದುಗೊಂಡಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ರ್‍ಯಾಲಿ ಮೂಲಕ ಕಾರ್ಯಕರ್ತರು ಹಾಗೂ ಮತದಾರರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ನಮೋ, ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷಗಳು ಮುಂದಾಗಿವೆ. ಅದಕ್ಕಾಗಿ ಮತದಾರರನ್ನ ಪ್ರೇರೇಪಿಸುತ್ತಿವೆ ಎಂದು ಆರೋಪಿಸಿದರು.
ಕಳೆದ ಐದು ವರ್ಷಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಅಭಿವೃದ್ಧಿ ನೀತಿಗಳಿಂದ ಈ ಪಕ್ಷಗಳು ಭಯಗೊಂಡಿದ್ದು, ಇದೀಗ ಸೇಡು ತೀರಿಸಿಕೊಳ್ಳಲು ಮುಂದಾಗಿವೆ ಎಂದರು. ಉತ್ತರ ಪ್ರದೇಶದಲ್ಲಿ ನಾವು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಪ್ರತಿಪಕ್ಷಗಳು ಇದಕ್ಕೆ ವಿರುದ್ಧವಾಗಿದ್ದು, ಕೇವಲ ಪಕ್ಷದ ಹಿತದೃಷ್ಟಿಯಿಂದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಂಡು ಟಿಕೆಟ್ ನೀಡಿವೆ. ಅವರೆಲ್ಲರೂ ಗಲಭೆ ಸೃಷ್ಟಿಸುವ ಮನಸ್ಥಿತಿ ಹೊಂದಿದ್ದಾರೆ ಎಂದರು. ಶಾಮ್ಲಿ, ಮುಜಾಫರ್ನಗರ, ಬಾಗ್ಪತ್, ಸಹರಾನ್ಪುರ್, ಗೌತಮ್ ಬುದ್ಧ ನಗರದ ಜನರನ್ನುದ್ದೇಶಿಸಿ ಮಾತನಾಡಿದ ನಮೋ, ಪ್ರತಿಪಕ್ಷಗಳ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿರಿ:ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಟ್ರಕ್ಗೆ ಮತ್ತೊಂದು ಟ್ರಕ್ ಡಿಕ್ಕಿ.. ನಾಲ್ವರ ಸಾವು, 22 ಜನರಿಗೆ ಗಾಯ!
ಮುಂದುವರೆದು ಮಾತನಾಡಿದ ಮೋದಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಿಂದ ಭಾರತದ ಪ್ರತಿ ಬಡ ಕುಟುಂಬಕ್ಕೂ ಮನೆ ನಿರ್ಮಾಣ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಉತ್ತರ ಪ್ರದೇಶದಲ್ಲಿ 15 ಕೋಟಿ ನಾಗರಿಕರು ಇದೀಗ ಉಚಿತವಾಗಿ ಪಡಿತರ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕಳೆದ ಐದು ವರ್ಷಗಳ ಹಿಂದೆ ಬಡವರಿಗೆ ನೀಡಬೇಕಾದ ಪಡಿತರ ಕಳ್ಳತನ ಮಾಡಲಾಗುತ್ತಿತ್ತು. ಇದೀಗ ಪ್ರತಿ ತುತ್ತು ಬಡವರ ಮನೆಗೆ ತಲುಪುತ್ತಿದೆ ಎಂದರು.
ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣಕ್ಕಾಗಿ ಪಂಚ ರಾಜ್ಯ ಚುನಾವಣೆಯಲ್ಲಿ ಬೃಹತ್ ಸಭೆ, ಸಮಾರಂಭ, ಮೆರವಣಿಗೆಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದ್ದು, ಇದೇ ಕಾರಣಕ್ಕಾಗಿ ಬಹುತೇಕ ಎಲ್ಲ ಪಕ್ಷಗಳು ವರ್ಚುವಲ್ ಹಾಗೂ ಡಿಜಿಟಲ್ ಮೊರೆ ಹೋಗಿವೆ. ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆಯ ವರ್ಚುವಲ್ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದರು.
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಮತದಾನವಾಗಲಿದ್ದು, ಮೊದಲನೇ ಹಂತ ಫೆ. 10ರಂದು ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ