ನವದೆಹಲಿ: ಮಣಿಪುರ ಹಿಂಸಾಚಾರ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ನಾಯಕರ ನಿಯೋಗ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಮಣಿಪುರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದೆ. ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿ ಕಲಹ ಪೀಡಿತ ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಖರ್ಗೆ ನಿಯೋಗ ಒತ್ತಾಯಿಸಿದೆ.
ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, 'ಇಂಡಿಯಾ' ಮೈತ್ರಿಕೂಟದ 31 ಸಂಸದರ ನಿಯೋಗ ಇಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿದೆ. ಮಣಿಪುರಕ್ಕೆ ಭೇಟಿ ನೀಡಿದ್ದ ಮೈತ್ರಿಕೂಟದ 21 ಸಂಸದರ ಮಾಹಿತಿ ಆಧರಿಸಿ ಮಣಿಪುರದ ಪರಿಸ್ಥಿತಿಯ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ವಿವರಿಸಿದ್ದೇವೆ. ಅಲ್ಲಿ ನಡೆಯುತ್ತಿರುವ ಘಟನೆಗಳು, ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಸೇರಿ 24 ಶಿಫಾರಸುಗಳನ್ನು ಸಲ್ಲಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ
ಮಣಿಪುರದಲ್ಲಿ ಇದುವರೆಗೆ 5,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 500ಕ್ಕೂ ಅಧಿಕ ಜನರು ಗಾಯಗೊಂಡರು. ಸುಮಾರು 60,000 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಶಿಬಿರದಲ್ಲಿರುವ ಜನರಿಗೆ ಸರಿಯಾದ ನೀರು, ಆಹಾರ ಸಿಗುತ್ತಿಲ್ಲ ಮತ್ತು ರೋಗಿಗಳಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ನಾವು ಮಣಿಪುರ ವಿಷಯದ ಬಗ್ಗೆ ರಾಷ್ಟ್ರಪತಿ ಮುರ್ಮು ಅವರ ಭೇಟಿ ಮಾಡಿ ಗಮನ ಸೆಳೆದಿದ್ದೇವೆ. ರಾಷ್ಟ್ರಪತಿಗಳು ಸಹ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಖರ್ಗೆ ತಿಳಿಸಿದರು.
ಸಂಸತ್ತಿನಲ್ಲಿ ಮಣಿಪುರದ ಕುರಿತು ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ಮತ್ತು ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯದ ಮೂಲಕ ಚರ್ಚೆಗೆ ನಾವು ಬಯಸಿದ್ದೇವೆ. ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ 65 ಸದಸ್ಯರು ನೋಟಿಸ್ ನೀಡಿದ್ದಾರೆ. ಆದರೆ, ಅದನ್ನು ಸರ್ಕಾರ ತಿರಸ್ಕರಿಸುತ್ತಿದೆ. ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಅಂಗೀಕಾರವಾಗದಿದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು ಎಂದು ಖರ್ಗೆ ವಿವರಿಸಿದರು.