ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ ನಡೆಸಲಿದೆ. ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದಿನಿಂದ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ರೋಡ್ ಶೋ ಜರುಗಲಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಕ್ಷದ ಇತರ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಟೇಲ್ ಚೌಕ್‌ನಿಂದ ಪಾರ್ಲಿಮೆಂಟ್ ಸ್ಟ್ರೀಟ್‌ವರೆಗೆ ಪ್ರಧಾನಿ ಮೋದಿ ರೋಡ್‌ಶೋ ನಡೆಸಲಿದ್ದಾರೆ. ಪಕ್ಷದ ವೇಳಾಪಟ್ಟಿಯ ಪ್ರಕಾರ ಈ ಮುನ್ನ ರೋಡ್‌ಶೋ ಮಂಗಳವಾರ ನಡೆಯಬೇಕಿತ್ತು. ಆದರೆ ಅದನ್ನು ಬದಲಾಯಿಸಿ ರೋಡ್ ಶೋ ಇವತ್ತೇ ನಡೆಯಲಿದೆ.
ದೆಹಲಿಯ ಕೆಲವು ಭಾಗಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಆದಾಗ್ಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಿಶೇಷ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಭರ್ಜರಿ ಗೆಲುವಿನ ನಂತರ ಪಕ್ಷದ ಮೊದಲ ಪ್ರಮುಖ ಸಭೆ ಇದಾಗಿದೆ. ಇದಕ್ಕೂ ಮೊದಲು, ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ, ಪ್ರಧಾನಿ ಮೋದಿ ಐದು ಗಂಟೆಗಳಿಗೂ ಹೆಚ್ಚು ಕಾಲ 50 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಮೆಗಾ ರೋಡ್ ಶೋ ನಡೆಸಿದ್ದರು.
ಭಾರತೀಯ ಜನತಾ ಪಕ್ಷ (ಬಿಜೆಪಿ) ಜನವರಿ 16 ರಂದು ಮಧ್ಯಾಹ್ನ 3 ರಿಂದ ಪಟೇಲ್ ಚೌಕ್‌ನಿಂದ ಸಂಸದ್ ಮಾರ್ಗ್-ಜೈ ಸಿಂಗ್ ರಸ್ತೆ ಜಂಕ್ಷನ್‌ವರೆಗೆ ಸಂಸದ್ ಮಾರ್ಗದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ರೋಡ್ ಶೋ ಆಯೋಜಿಸುತ್ತಿದೆ. ಭಾರತದ ಪ್ರಧಾನ ಮಂತ್ರಿಗಳು ಈ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ರೋಡ್‌ಶೋ ಸಾಗುವ ಮಾರ್ಗದ ಸುತ್ತಮುತ್ತ ಸುಗಮ ಟ್ರಾಫಿಕ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಸಂಚಾರ ವ್ಯವಸ್ಥೆಗಳು ಜಾರಿಯಲ್ಲಿರುತ್ತವೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.