ನವದೆಹಲಿ: ಎಂಎಸ್‌ಎಂಇ ಕ್ಷೇತ್ರದಲ್ಲಿ ಉದ್ಯೋಗ ನೀಡುವವರು ಇಂದು ನಿರುದ್ಯೋಗ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಧಾನಮಂತ್ರಿ ತಮ್ಮ ನಾಟಕದೊಂದಿಗೆ ಭಾರತದ ನೈಜ ಪರಿಸ್ಥಿತಿಯ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಮತ್ತು ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭಾರತದ ಭವಿಷ್ಯದೊಂದಿಗೆ ಪ್ರಧಾನಿ ಮೋದಿ ಆಟವಾಡುತ್ತಿದ್ದಾರೆ: ರಾಹುಲ್ ಗಾಂಧಿ ಕಿಡಿ - ಟಾಯ್ಕೋಥಾನ್-2021
ಆಟಿಕೆ ಉದ್ಯಮಗಳ ಕುರಿತು ಟಾಯ್ಕೋಥಾನ್-2021ರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಮೋದಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಭಾರತದ ಭವಿಷ್ಯದ ಜೊತೆ ಅವರು ಆಟವಾಡುತ್ತಿದ್ದಾರೆ ಎಂದಿದ್ದಾರೆ.
ಟಾಯ್ಕೋಥಾನ್-2021ರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಮಾರುಕಟ್ಟೆಯ ವ್ಯವಹಾರಕ್ಕೆ ಭಾರತವು 1.5 ಬಿಲಿಯನ್ ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದರು. ಇಂದು ಪ್ರಪಂಚವು ಭಾರತದ ಪ್ರಸ್ತುತ ಸಾಮರ್ಥ್ಯವನ್ನು, ಕಲಾ-ಸಂಸ್ಕೃತಿಯನ್ನು, ಭಾರತದ ಸಮಾಜವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಬಯಸುತ್ತಿದೆ.
ನಮ್ಮ ಆಟಿಕೆಗಳು ಮತ್ತು ಗೇಮಿಂಗ್ ಉದ್ಯಮವೂ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ದೇಶಕ್ಕೆ ಈಗ ಶೇಕಡಾ 80ರಷ್ಟು ಆಟಿಕೆಗಳನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ದೇಶದಿಂದ ಹೊರಹೋಗುತ್ತಿದೆ ಎಂದಿದ್ದರು. ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಭಾರತದ ಭವಿಷ್ಯದೊಂದಿಗೆ ಮೋದಿ ಆಟವಾಡುತ್ತಿದ್ದಾರೆ ಎಂದಿದ್ದಾರೆ.