ನವದೆಹಲಿ:ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ಮುಂದಿನ ಯೋಜನೆಗಳು ಮತ್ತು ರೂಪುರೇಷೆಗಳ ಕುರಿತಾಗಿ ಚರ್ಚಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ 14 ರಾಜಕೀಯ ಮುಖಂಡರೊಂದಿಗೆ ನವದೆಹಲಿಯಲ್ಲಿ ಇಂದು ಸಭೆ ನಡೆಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ರಾಜ್ಯದ ಸ್ಥಾನಮಾನದಿಂದ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ ಬಳಿ ಕೇಂದ್ರ ಸರ್ಕಾರದೊಂದಿಗೆ ಇದೇ ಮೊದಲ ಸರ್ವಪಕ್ಷ ಸಭೆಯಾಗಿದೆ.
ಮಧ್ಯಾಹ್ನ 3ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಜಮ್ಮುಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಬಲಪಡಿಸುವ ಕುರಿತಾಗಿ ನಡೆಯಲಿದ್ದು, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಕ್ರಮಗಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದೆ.
ಆದರೂ ಕೇಂದ್ರಸರ್ಕಾರ ಈ ಸರ್ವ ಪಕ್ಷ ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆಯಾಗಬೇಕೆಂದು ಬಹಿರಂಗಪಡಿಸಿಲ್ಲ. ಜಮ್ಮು ಕಾಶ್ಮೀರದ ಎಲ್ಲಾ ನಾಯಕರು ಮುಕ್ತ ಮನಸ್ಸಿನಿಂದ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತೆ ನೀಡಬೇಕೆಂದು ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.