ನವದೆಹಲಿ:ದ್ವಾರಕಾ ಉಪನಗರದ ಸೆಕ್ಟರ್ 10ರಲ್ಲಿರುವ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಇಂದು ಸಂಜೆ ರಾವಣ ದಹನ ಮಾಡಲಿದ್ದಾರೆ. ರಾಮಲೀಲಾ ಸಮಿತಿ ಸಂಚಾಲಕ ರಾಜೇಶ್ ಗೆಹ್ಲೋಟ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಹನ ಪ್ರಕ್ರಿಯೆ ನೆರವೇರಿಸಿದ್ದರು. ಇಂದು ಸಂಜೆ 5 ಗಂಟೆಗೆ ಪ್ರಧಾನಿ ದ್ವಾರಕಾಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ದ್ವಾರಕಾ ಸೆಕ್ಟರ್ 10ರಲ್ಲಿ ಆಯೋಜಿಸಲಾಗಿದ್ದ 11ನೇ ಬೃಹತ್ ರಾಮಲೀಲಾ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸುವ ಕುರಿತು ಊಹಾಪೋಹಗಳು ಎದ್ದಿದ್ದವು. ಆದರೆ ಕೊನೆಯವರೆಗೂ ಇದು ದೃಢಪಟ್ಟಿರಲಿಲ್ಲ. ಸೋಮವಾರ ಸಂಜೆ ಈ ಮಾಹಿತಿ ಹೊರ ಬಿದ್ದಿದೆ.
ದೆಹಲಿ ರಾಜ್ಯ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಶೌರ್ಯ ಜಾಗರಣ ಯಾತ್ರೆಯನ್ನು ಕೈಗೊಂಡಿದ್ದವು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತರು ರಾಮಲೀಲಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಮಲೀಲಾ ಮೈದಾನದಲ್ಲಿ ಸುಮಾರು 10,000 ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇದೆ. ದೂರದ ಊರುಗಳಿಂದ ರಾಮಲೀಲಾ ಮೈದಾನದಲ್ಲಿ ನಡೆಯುವ ರಾವಣ ದಹನ ಕಾರ್ಯಕ್ರಮ ನೋಡಲು ಆಗಮಿಸುತ್ತಾರೆ.
ಈ ನಡುವೆ ಪ್ರಧಾನಿ ಲಂಕಾಸುರನ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅಲ್ಲಿನ ಜನರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ರಾಮಲೀಲಾದತ್ತ ಹರಿದು ಬರುವ ಸಾಧ್ಯತೆ ಇದೆ.