ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಯೋಗಿ ನಾಡು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳುತ್ತಿದ್ದು, ದಾಖಲೆಯ 1,406 ಯೋಜನೆಗಳಿಗೆ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಸಹ ಮಾಡಿದ್ದಾರೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ 'ನವ ಉತ್ತರ ಪ್ರದೇಶದ ನವ ಭಾರತ' ಹೂಡಿಕೆಗೆ ದೇಶದ ಅತ್ಯುತ್ತಮ ತಾಣವಾಗಿದೆ. ಇಂದು ನಡೆಯುವ ಸಮಾರಂಭ ಅನೇಕ ಪ್ರಮುಖಗಳಿಗೆ ಕಾರಣವಾಗಲಿದೆ ಎಂದಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ಲಖನೌದ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1:45ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹುಟ್ಟೂರು ಕಾನ್ಪುರ್ದ ಪರೌಂಕ್ ಗ್ರಾಮಕ್ಕೆ ಭೇಟಿ ನೀಡಲಿದ್ದು, ಅಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಅಂಬೇಡ್ಕರ ಭವನಕ್ಕೂ ಭೇಟಿ ನೀಡಲಿದ್ದಾರೆ.
ಇಂದು ಸುಮಾರು 80,000 ಕೋಟಿ ರೂಪಾಯಿಗೂ ಅಧಿಕ ವೆಚ್ಚದ 1,406 ಯೋಜನೆಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಇದರಲ್ಲಿ ಪ್ರಮುಖವಾಗಿ ಕೃಷಿ ಯೋಜನೆಗಳು, ಐಟಿ,ಎಲೆಕ್ಟ್ರಾನಿಕ್ಸ್, ಎಂಎಸ್‌ಎಂಇ, ಹಾಲು ಉತ್ಪಾದನೆ, ನವೀಕರಿಸಬಹುದಾದ ಇಂಧನ, ಫಾರ್ಮಾ, ಪ್ರವಾಸೋದ್ಯಮ, ರಕ್ಷಣಾ ಮತ್ತು ಏರೋಸ್ಪೇಸ್, ಕೈಮಗ್ಗ ಮತ್ತು ಜವಳಿ ಮುಂತಾದ ವೈವಿಧ್ಯಮಯ ವಲಯ ಸೇರಿಕೊಂಡಿವೆ. ಸಮಾರಂಭದಲ್ಲಿ ದೇಶದ ಉನ್ನತ ಉದ್ಯಮ ನಾಯಕರು ಭಾಗವಹಿಸಲಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದು, ಹೊತ್ತಿ ಉರಿದ ಕಾರು; ಡ್ರೈವರ್ ಸಜೀವ ಸಮಾಧಿ
ಮೊದಲ ಅಡಿಗಲ್ಲು ಸಮಾರಂಭದಲ್ಲಿ 61,500 ಕೋಟಿ ರೂ.ಗೂ ಅಧಿಕ ಮೊತ್ತದ 81 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಎರಡನೇ ಸಮಾರಂಭದಲ್ಲಿ 67,000 ಕೋಟಿ ರೂ.ಗೂ ಹೆಚ್ಚು ಹೂಡಿಕೆಯ 290 ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. ಕಳೆದ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲು ಮಾಡಿದ್ದು, ಈ ವೇಳೆ ನರೇಂದ್ರ ಮೋದಿ ಅನೇಕ ಸಲ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದರು. ಫಲಿತಾಂಶದ ಬಳಿಕ ಇದೇ ಮೊದಲ ಸಲ ಅವರು ಯೋಗಿ ನಾಡಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.