ನವದೆಹಲಿ:ವಸಾಹತುಶಾಹಿ ನೆನಪುಗಳನ್ನು ಅಳಿಸಿ ಹಾಕಲು ದೆಹಲಿಯ ಇಂಡಿಯಾ ಗೇಟ್‌ನ ಕರ್ತವ್ಯ ಪಥ(ರಾಜಪಥ) ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.
ಸುಮಾರು 3 ಕಿಮೀ ದೂರವಿರುವ ಕರ್ತವ್ಯಪಥ ರಸ್ತೆಯನ್ನು ರಾಜಪಥ ಎಂದು ಕರೆಯಲಾಗುತ್ತಿತ್ತು. ಇಲ್ಲಿ ನವೀಕರಿಸಲಾದ ಲ್ಯಾಂಡ್ಸ್ಕೇಪ್, ಕಾಲ್ನಡಿಗೆ ಪಥ, ಹುಲ್ಲುಹಾಸುಗಳು, ಹಸಿರು ಪಟ್ಟಿಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಕರ್ಯ ಬ್ಲಾಕ್‌ಗಳು, ಸುಧಾರಿತ ಮಾರ್ಗಸೂಚಿ ಫಲಕಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಈಗ ಇಲ್ಲಿ ಅಳವಡಿಸಲಾಗಿದೆ.
ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳ, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ದೀಪಗಳು ಸಾರ್ವಜನಿಕರಿಗೆ ಉತ್ತಮ ಅನುಭವ ನೀಡುತ್ತವೆ.
ವಸಾಹತುಶಾಹಿ ಮೆಟ್ಟಿ ನಿಂತ ನೇತಾಜಿ ಪ್ರತಿಮೆ:ಇಂಡಿಯಾ ಗೇಟ್ ಬಳಿ ನಿರ್ಮಿಸಲಾಗಿರುವ ಝಗಮಗಿಸುವ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ನೇತಾಜಿ ಅವರ ಪ್ರತಿಮೆಯನ್ನು ಗ್ರಾನೈಟ್‌ನಿಂದ ನಿರ್ಮಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಅಪಾರ ಕೊಡುಗೆಗೆ ಸೂಕ್ತವಾದ ಗೌರವವಾಗಿದೆ. ಇದು ಅವರಿಗೆ ದೇಶದ ಋಣಿಯ ಸಂಕೇತವಾಗಿ ಪರಿಗಣಿಸಲಾಗಿದೆ.
ಮೈಸೂರಿನ ಶಿಲ್ಪಿಯಾಗಿದ್ದ ಅರುಣ್ ಯೋಗಿರಾಜ್ ಅವರು ಪ್ರತಿಮೆಯನ್ನು ರೂಪಿಸಿದ್ದು, 28 ಅಡಿ ಎತ್ತರದ ಪ್ರತಿಮೆ ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. 65 ಮೆಟ್ರಿಕ್ ಟನ್ ತೂಕವಿದೆ.
ಕರ್ತವ್ಯಪಥ ಹೆಸರಿನಲ್ಲಿ ಹೊಸ ಇತಿಹಾಸ:ಬಳಿಕ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಭಾರತಕ್ಕೆ ಆತ್ಮವಿಶ್ವಾಸ ಸಿಕ್ಕಿದೆ. ಗುಲಾಮಗಿರಿ ಪ್ರತಿನಿಧಿಸುತ್ತಿದ್ದ ರಾಜಪಥ ಕಾಲಗರ್ಭ ಸೇರಿದೆ. ಕರ್ತವ್ಯಪಥ ಹೆಸರಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದು ಸ್ವಾಭಿಮಾನದ ಸಂಕೇತವಾಗಿದೆ. ಕರ್ತವ್ಯಪಥವನ್ನು ಉದ್ಘಾಟಿಸಿದ್ದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾ ಮಾನವತಾವಾದಿಯಾಗಿದ್ದರು. ಬೋಸ್ ಅವರು ವಿಶ್ವ ನಾಯಕ ಎಂದು ಹೆಸರಾಗಿದ್ದರು. ಸ್ವಾತಂತ್ರ್ಯ ನಂತರ ದೇಶ ನಡೆದಿದ್ದರೆ ಹೊಸ ಭಾರತವೇ ನಿರ್ಮಾಣವಾಗುತ್ತಿತ್ತು. ದೇಶ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಖಂಡ ಭಾರತದ ಮೊದಲ ಪ್ರಧಾನಿ ನೇತಾಜಿ:ಅಖಂಡ ಭಾರತದ ಮೊದಲ ಪ್ರಧಾನಿ ನೇತಾಜಿ ಬೋಸ್ ಆಗಿದ್ದರು. ಅವರು ದೇಶ ಸ್ವಾತಂತ್ರ್ಯ ಪಡೆದ ನಂತರ ಧ್ವಜಾರೋಹಣ ಮಾಡಿದ ಮೊದಲಿಗರು. ಸ್ವಾತಂತ್ರ್ಯ ನಂತರ ನೇತಾಜಿ ಅವರನ್ನು ಮರೆತುಬಿಟ್ಟರು ಎಂದರು.
ಗುಲಾಮಿತನ ಬಿಡಬೇಕಿದೆ:ಗುಲಾಮಿತನದ ಮಾನಸಿಕತೆಯನ್ನು ನಾವು ಬಿಡಬೇಕು. ಕಿಂಗ್ ಜಾರ್ಜ್ ಪ್ರತಿಮೆ ಜಾಗದಲ್ಲಿ ನೇತಾಜಿ ಪ್ರತಿಮೆ ತಲೆಎತ್ತಿದೆ. ಬ್ರಿಟಿಷ್ ಕಾಲದಲ್ಲಿ ಸ್ಥಾಪಿಸಲಾಗಿದ್ದ 5ನೇ ಜಾರ್ಜ್ ಪುತ್ಥಳಿ ಜಾಗದಲ್ಲಿ ದೇಶದ ಹೆಮ್ಮೆಯ ಸಂಕೇತವಾದ ನೇತಾಜಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಇದು ಕೇವಲ ಪ್ರತಿಮೆಯಲ್ಲ, ಗುಲಾಮಿತನವನ್ನು ಮೆಟ್ಟಿ ನಿಲ್ಲುವ ಸ್ವಾಭಿಮಾನವಾಗಿದೆ. ಎಂದು ಬಣ್ಣಿಸಿದರು.
ಓದಿ: ಕರ್ತವ್ಯ ಪಥ್ ಇಂದು ಉದ್ಘಾಟನೆ: ಕಾಲಗರ್ಭ ಸೇರಲಿದೆ ರಾಜಪಥ್ ಹೆಸರು