ನವದೆಹಲಿ: 'ಡೀಪ್‌ಫೇಕ್' ಸೃಷ್ಟಿಸಲು ಕೃತಕ ಬುದ್ಧಿಮತ್ತೆ ಬಳಕೆಯನ್ನು 'ಸಮಸ್ಯೆ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬಳಸಿಕೊಂಡು ರೂಪಿಸುವ ನಕಲಿ ವಿಡಿಯೋಗಳ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ.
"ಡೀಪ್‌ಫೇಕ್ ಅನ್ನು ರಚಿಸಲು ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ನಾನು ಮಾಧ್ಯಮಗಳಿಗೆ ಒತ್ತಾಯಿಸುತ್ತೇನೆ. ಡೀಪ್ಫೇಕ್ಗಳು ಪ್ರಸ್ತುತ ಭಾರತೀಯ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ಇದು ಸಮಾಜದಲ್ಲಿ ಅವ್ಯವಸ್ಥೆ ಉಂಟು ಮಾಡಬಹುದು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಮತ್ತು ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಅನೇಕ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ. ಇದನ್ನು ಮನಗಂಡು, ನಕಲಿ ವಿಷಯಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಮಹತ್ವದ ಸಭೆಗೆ ಕರೆದಿದೆ.
ಇದೀಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ (ಈ ಹಿಂದಿನ ಟ್ವಿಟರ್), ಯೂಟ್ಯೂಬ್‌ಗೆ ಸಭೆಗೆ ಹಾಜರಾಗಲು ಮತ್ತು ಈ ವಿಷಯದ ಬಗ್ಗೆ ತಮ್ಮ ದೃಷ್ಟಿಕೋನ, ಸಂಭಾವ್ಯ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬೆಲ್ಲ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ವಿನಂತಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.