ಬೆಂಗಳೂರು:ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ರಾಜ್ಯಾದ್ಯಂತ ಆಗಿರುವ ಸಂಪೂರ್ಣ ನೆರೆ ಬಗ್ಗೆ ವಿಚಾರಿಸಿದರು. ಬೆಳೆ ನಷ್ಟ, ಸಾವು - ನೋವು, ಇತರ ಮಾಹಿತಿ ಪಡೆದಿದ್ದಾರೆ. ಬೆಂಗಳೂರು ಪರಿಸ್ಥಿತಿಯನ್ನು ವಿಶೇಷವಾಗಿ ವಿಚಾರ ಮಾಡಿದ್ದಾರೆ. ಏನೆಲ್ಲಾ ಸಹಾಯವಾಗಬೇಕು ತಿಳಿಸಿ, ನಾನು ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೂರವಾಣಿ ಕರೆ ಮಾಡಿ ಇಲ್ಲಿಯ ಪ್ರವಾಹದ ಪರಿಸ್ಥಿತಿ ಬಗ್ಗೆ ಕೇಳಿದ್ದಾರೆ. ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದಾರೆ ಅವರು ಕೂಡ ಕೇಂದ್ರದಿಂದ ಏನು ಸಹಾಯ ಮಾಡಬೇಕೋ, ಅದೆಲ್ಲವನ್ನೂ ಮಾಡಲು ಸಿದ್ಧವಿದ್ದೇವೆ ಎಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.