ನವದೆಹಲಿ:ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನ ಭಾರತದ ಧ್ವನಿಯನ್ನೇ ಕಳೆದುಕೊಂಡಂತಾಗಿದೆ ಎಂದು ಪ್ರಧಾನಿ ಮೋದಿ ಲತಾ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ರಾಷ್ಟ್ರಪತಿ ಭಾಷಣದ ಮೇಲೆ ವಂದನಾರ್ಪಣೆಗೆ ಉತ್ತರ ನೀಡಿದ ಅವರು, ಬಡವರ ಮನೆಗಳಲ್ಲಿ ಬೆಳಕು ಮೂಡಿದ್ದು, ಬಡವರ ಸಂತಸ ದೇಶದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಗ್ಯಾಸ್ ಸಂಪರ್ಕ ಮಹಿಳೆಯರ ಸಂಕಷ್ಟ ದೂರ ಮಾಡಿದೆ ಎಂದು ಹೇಳಿದರು.
ಹಲವು ವಲಯಗಳಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಭಾರತ ವಿಶ್ವದ ನಾಯಕತ್ವ ವಹಿಸಬೇಕಾಗಿದೆ. ಸ್ವಾತಂತ್ರ್ಯಾನಂತರ ಬಡವರ ಎಲ್ಲಾ ಮನೆಗಳಿಗೆ ವಿದ್ಯುತ್, ಗ್ಯಾಸ್ ಸಂಪರ್ಕ ಕಲ್ಪಿಸಿದ್ದು ಸರ್ಕಾರ ಸಾಧನೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ವಿರುದ್ಧ ಪ್ರಧಾನಿ ಟೀಕಾ ಪ್ರಹಾರ:ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ತೆಲಂಗಾಣ, ಜಾರ್ಖಂಡ್ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ತಿರಸ್ಕೃತವಾಗಿ ದೇಶದಿಂದಲೇ ಪಕ್ಷ ಮಾಯವಾಗುತ್ತಿದೆ ಎಂದು ಟೀಕಿಸಿದರು. ಕೊರೊನಾ ವೇಳೆ ಜನರು ಎಲ್ಲಿದ್ದಾರೋ ಅಲ್ಲಿಯೇ ಇರಿ ಎಂದು ವಿಶ್ವಸಂಸ್ಥೆ ಹೇಳಿತ್ತು.
ಆದರೆ, ಕಾಂಗ್ರೆಸ್ ನಾಯಕರು ಮುಗ್ಧ ಜನರು, ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಿದ್ದರು. ಇದರಿಂದ ಉತ್ತರಾಖಂಡ, ಪಂಜಾಬ್, ಮಹಾರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಕೊರೊನಾ ಉತ್ತುಂಗಕ್ಕೇರಲು ಕಾರಣವಾಯಿತು ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಜನರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ರಾಷ್ಟ್ರೀಯ ಪಕ್ಷವೊಂದು ಜನರ ಜೀವದ ಜೊತೆ ಆಟವಾಡಿದೆ. ಕೊರೊನಾ ನಿರ್ಬಂಧ ಹೇರಿದರೆ ಕೇಂದ್ರ ಸರ್ಕಾರಕ್ಕೆ ಏನು ಪ್ರಯೋಜನವಿತ್ತು. ಇದು ಜನರ ಒಳಿತಿಗಾಗಿ ಹಾಕಲಾಗಿದ್ದ ನಿರ್ಬಂಧ ಅಷ್ಟೇ ಎಂದು ಹೇಳಿದರು.
ಯೋಗ ಮಾಡಲೂ ವಿರೋಧ:ಯೋಗ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಲಾಗುತ್ತೆ. ಅದನ್ನು ಸಾಮೂಹಿಕವಾಗಿ ಮಾಡಲು ಹೇಳಿದಾಗ ಆಗಲೂ ವಿರೋಧ ವ್ಯಕ್ತವಾಯಿತು. ಸರ್ಕಾರ ಮಾಡುವ ಎಲ್ಲಾ ಉತ್ತಮ ಕಾರ್ಯಗಳನ್ನು ಕಾಂಗ್ರೆಸ್ ವಿರೋಧಿಸುವುದರಿಂದ ಈಗ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅವಲೋಕಿಸಿಕೊಳ್ಳಲಿ ಎಂದು ಹೇಳಿದರು.