ನವದೆಹಲಿ:ದೆಹಲಿಯಲ್ಲಿ ಜಿ20 ವಿದೇಶಾಂಗ ಸಚಿವರ ಸಭೆ ನಡೆಯುತ್ತಿದೆ. ಭಾರತ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅಧ್ಯಕ್ಷತೆ ವಹಿಸಿದ್ದಾರೆ. ವಿಶ್ವದ ಹಲವು ಗಂಭೀರ ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ. ರಷ್ಯಾ, ಚೀನಾ, ಸೌದಿ ಅರೇಬಿಯಾ, ಮೆಕ್ಸಿಕೋ ಸೇರಿದಂತೆ ಹಲವಾರು ರಾಷ್ಟ್ರಗಳ ಸಚಿವರು ಭಾಗವಹಿಸಿದ್ದಾರೆ.
ಇದೇ ವೇಳೆ ಸಭೆಯನ್ನುದ್ದೇಶಿಸಿ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಜಿ20 ವಿದೇಶಾಂಗ ಸಚಿವರ ಸಭೆ ಮೂಲಕ ನಾನು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಇದು ಏಕತೆ, ಉದ್ದೇಶ ಮತ್ತು ಕ್ರಿಯೆಯ ಅಗತ್ಯವನ್ನು ಸಂಕೇತಿಸುತ್ತದೆ. ಇಂದಿನ ಸಭೆಯು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಉದ್ದೇಶಗಳ ಈಡೇರಿಕೆಯನ್ನು ಪ್ರತಿಬಿಂಬಿಸುತ್ತದೆ" ಎಂದರು.
"ಬಹುಪಕ್ಷೀಯ ಸಂಬಂಧಗಳು ಇಂದು ಇಕ್ಕಟ್ಟಿಗೆ ಸಿಲುಕಿವೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಎರಡನೆಯ ಮಹಾಯುದ್ಧದ ನಂತರ ಮಾಡಿಕೊಳ್ಳಲಾದ ಒಪ್ಪಂದಗಳು ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದಾಗಿತ್ತು. ರಾಷ್ಟ್ರಗಳ ನಡುವಿನ ಸಾಮಾನ್ಯ ಹಿತಾಸಕ್ತಿಯ ಕುರಿತು ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವುದಾಗಿದೆ" ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿಗೆ ಅಡೆತಡೆಗಳು: "ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗ, ಭಯೋತ್ಪಾದನೆ ಮತ್ತು ಯುದ್ಧವು ಜಾಗತಿಕವಾಗಿ ಕಾಡಿವೆ ಎಂಬುದು ಸ್ಪಷ್ಟ. ಇದರ ಪರಿಣಾಮಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚಾಗಿ ಎದುರಿಸುತ್ತಿವೆ. ಹಲವು ಅಡೆತಡೆಗಳ ನಂತರ ನಾವೀಗ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೂ ಅಡ್ಡಿ-ಆತಂಕಗಳಿವೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಜನರಿಗೆ ಆಹಾರ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದರೂ ಸಾಲದ ಭಾರದಿಂದ ಹೆಣಗಾಡುವಂತಾಗಿದೆ" ಎಂದು ಪ್ರಧಾನಿ ಅಭಿಪ್ರಾಯಪಟ್ಟರು.