ಗುವಾಹಟಿ:ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳ ಮತ್ತು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಮೊದಲಿಗೆ ಮಧುರೈನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಭಾಷಣ ಮಾಡಲಿದ್ದು, ಇದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಮತ್ತು ಇತರ ಮುಖಂಡರು ಭಾಗಿಯಾಗಲಿದ್ದಾರೆ. ಏಪ್ರಿಲ್ 6 ರಂದು ರಾಜ್ಯ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದೆ.
ಇನ್ನು ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಕೇರಳಕ್ಕೆ ತೆರಳಲಿದ್ದು, ಅಲ್ಲಿ ಅವರು ಎರಡು ಚುನಾವಣಾ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್ 30 ರಂದು ಕೇರಳದ ಪಾಲಕ್ಕಾಡ್ ಮತ್ತು ತಮಿಳುನಾಡಿನ ಧರಪುರಂನಲ್ಲಿ ನಡೆದ ಚುನಾವಣಾ ಸಾರ್ವಜನಿಕ ಸಭೆಗಳಲ್ಲಿ ಪ್ರಧಾನಿ ಭಾಗಿಯಾಗಿದ್ದರು.
ವಿಧಾನ ಕದನಕ್ಕೆ ಮೋದಿ ಪ್ರಚಾರ ಗುರುವಾರ ಮಧುರೈನ ಪ್ರಸಿದ್ಧ ಮೀನಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಸಾಂಪ್ರದಾಯಿಕ ಧೋತಿ, ಕುರ್ತಾ ಮತ್ತು ಅಂಗವಸ್ತ್ರ ಧರಿಸಿದ್ದರು ಎಂದು ತಮಿಳುನಾಡು ಬಿಜೆಪಿ ಘಟಕ ತನ್ನ ಅಧಿಕೃತ ಟ್ವಿಟರ್ನಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮತ್ತು ಶುಕ್ರವಾರದ ನಡುವೆ ನಾಲ್ಕು ಚುನಾವಣಾ ರಾಜ್ಯಗಳಲ್ಲಿ 36 ಗಂಟೆಗಳಲ್ಲಿ ಐದು ಸಾವಿರ ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುತ್ತಿದ್ದಾರೆ. ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅನಿಲ್ ಬಲೂನಿ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.
ದೆಹಲಿಯಿಂದ ಅಸ್ಸೋಂ, ಅಸ್ಸೋಂನಿಂದ ಪಶ್ಚಿಮ ಬಂಗಾಳ, ಪಶ್ಚಿಮ ಬಂಗಾಳದಿಂದ ತಮಿಳುನಾಡು ಮತ್ತು ತಮಿಳುನಾಡಿನಿಂದ ಕೇರಳಕ್ಕೆ ಈ ರೀತಿ ಪ್ರಧಾನಿ ನರೇಂದ್ರ ಮೋದಿ 36 ಗಂಟೆಗಳಲ್ಲಿ 5,000 ಕಿ.ಮೀ ಗಿಂತ ಹೆಚ್ಚು ಪ್ರಯಾಣಿಸಲಿದ್ದು ನಾಲ್ಕು ರಾಜ್ಯಗಳಲ್ಲಿ ಅಭಿಯಾನ ನಡೆಸಲಿದ್ದಾರೆ.