ಕರ್ನಾಟಕ

karnataka

By ETV Bharat Karnataka Team

Published : Dec 30, 2023, 6:14 PM IST

ETV Bharat / bharat

550 ವರ್ಷಗಳ ಕಾಯುವಿಕೆಗೆ ಜ. 22 ರಂದು ಮುಕ್ತಿ, ಭಕ್ತರೇ ನೀವಿದ್ದ ಸ್ಥಳದಿಂದಲೇ ಶ್ರೀರಾಮನ ಪೂಜಿಸಿ: ಪ್ರಧಾನಿ ಮೋದಿ

ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ಪುರುಷೋತ್ತಮ, ಭಗವಾನ್ ಶ್ರೀರಾಮನ ಐತಿಹಾಸಿಕ 'ಪ್ರಾಣ ಪ್ರತಿಷ್ಠಾಪನೆ'ಗೆ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. 500 ವರ್ಷಗಳ ಕಾಯುವಿಕೆಗೆ ಅಂದು ಮುಕ್ತಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅಯೋಧ್ಯೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ವಿಕಾಸ್​ (ಅಭಿವೃದ್ಧಿ), ವಿರಾಸತ್ (ಪರಂಪರೆ) ಹಾದಿಯಲ್ಲಿ ದೇಶ ಮುನ್ನಡೆಯುತ್ತಿದೆ. ನಮ್ಮ ಪರಂಪರೆಯು ಜೀವನದ ಹಾದಿಯಾಗಿದೆ ಎಂದು ಅವರು ಹೇಳಿದರು.

ಅಂದು ನಡೆಯುವ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ. ಜನದಟ್ಟಣೆ ಉಂಟಾಗಿ, ಭದ್ರತಾ ಸಮಸ್ಯೆ ಎದುರಾಗುತ್ತದೆ ಎಂದು ಮತ್ತೊಮ್ಮೆ ಮನವಿ ಮಾಡಿದ ಅವರು, ನೀವಿದ್ದ ದೇವಾಲಯಗಳಲ್ಲೇ ರಾಮನನ್ನು ಪೂಜಿಸಿ, ಆರಾಧಿಸಿ. ಆಹ್ವಾನಿತರು ಮಾತ್ರ ಕಾರ್ಯಕ್ರಮಕ್ಕೆ ಬನ್ನಿ ಎಂದು ಕೋರಿದರು.

ರಾಮನ ಮಂದಿರಕ್ಕಾಗಿ 550 ವರ್ಷಗಳ ಕಾಲ ಕಾದಿದ್ದೇವೆ. ಆ ಸುದಿನ ಜನವರಿ 22 ಕ್ಕೆ ಸಾಕಾರವಾಗಲಿದೆ. ಉದ್ಘಾಟನೆಯ ಬಳಿಕ ಮಂದಿರ ಸರ್ವಜನರಿಗೆ ತೆರೆದಿರುತ್ತದೆ. ಹೀಗಾಗಿ ನೂಕುನುಗ್ಗಲು, ಜನಸಂದಣಿ ತಪ್ಪಿಸಲು ಅಂದಿನ ಕಾರ್ಯಕ್ರಮಕ್ಕೆ ಭಕ್ತರು ಬರಬೇಡಿ ಎಂದು ನಾನು ಪದೇ ಪದೆ ಮನವಿ ಮಾಡುವೆ ಎಂದರು.

ದೇವಾಲಯಗಳ ಸ್ವಚ್ಛತೆಗೆ ಕರೆ:ಭವ್ಯ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ಇರುವ ದೇವಾಲಯಗಳ ಸ್ವಚ್ಛತೆಗೆ ಪ್ರಧಾನಿ ಮೋದಿ ಅವರು ಕರೆ ನೀಡಿದರು. ಜನವರಿ 14 ರಿಂದ ಮಂದಿರದ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತವೆ. ಅಂದಿನಿಂದ ದೇಶಾದ್ಯಂತ ಇರುವ ಯಾತ್ರಾ ಸ್ಥಳಗಳು, ದೇವಸ್ಥಾನಗಳನ್ನು ಸ್ವಚ್ಛತೆ ಮಾಡುವ ಆಂದೋಲನವನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಶ್ರೀರಾಮ ಇಡೀ ಮನುಕುಲಕ್ಕೆ ಆದರ್ಶ. ಮಂದಿರದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವಾಗ ನಮ್ಮ ಎಲ್ಲಾ ದೇವಾಲಯಗಳು ಸ್ವಚ್ಛವಾಗಿರಬೇಕು. ಹೀಗಾಗಿ ಜನವರಿ 14 ರಿಂದ 22 ರ ವರೆಗೆ ದೇಶದಲ್ಲಿ ದೇವಾಲಯಗಳ ಸ್ವಚ್ಛತಾ ಆಂದೋಲನ ನಡೆಸಿ. ಟೆಂಟ್​ನಲ್ಲಿದ್ದ ರಾಮ ಈಗ ಭವ್ಯ ಮಂದಿರಕ್ಕೆ ಕಾಲಿಡುತ್ತಿದ್ದಾನೆ. ಅಭಿವೃದ್ಧಿ ಹೊಂದಿದ ದೇಶವೆಂಬ ಅಭಿಯಾನವೂ ಅಯೋಧ್ಯೆಯಿಂದಲೇ ಆರಂಭವಾಗಲಿದೆ ಎಂದು ಮೋದಿ ಹೇಳಿದರು.

ಅಭಿವೃದ್ಧಿ ಕಾಮಗಾರಿಗಳು:ಇಂದು 15,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದೆ. ಮೂಲಸೌಕರ್ಯ ಸಂಬಂಧಿತ ಕಾಮಗಾರಿಗಳು ಮತ್ತೊಮ್ಮೆ ಆಧುನಿಕ ಅಯೋಧ್ಯೆಯನ್ನು ದೇಶದ ಭೂಪಟದಲ್ಲಿ ಪ್ರತಿಷ್ಠಾಪಿಸಲಿವೆ. ನವಭಾರತ ತನ್ನ ಯಾತ್ರಾ ಸ್ಥಳಗಳನ್ನು ಸುಂದರಗೊಳಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಜಗತ್ತಿನಲ್ಲಿಯೂ ಸಾಧನೆ ಮಾಡುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ನವೀಕರಿಸಲಾಗಿರುವ ರೈಲು ನಿಲ್ದಾಣ, ಹೊಸ ಸುಸಜ್ಜಿತ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ವಂದೇ ಭಾರತ, ಅಮೃತ್​ ಭಾರತ್​ ರೈಲುಗಳಿಗೂ ಚಾಲನೆ ನೀಡಿದರು. ನಗರದಲ್ಲಿ 15 ಕಿ.ಮೀ.ವರೆಗೂ ರೋಡ್​ ಶೋ ನಡೆಸಿದರು. ಜನರು ಪ್ರಧಾನಿಗೆ ಪುಷ್ಪವೃಷ್ಟಿ ಸುರಿಸಿದರು.

ಇದನ್ನೂ ಓದಿ:ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಬಾಲರಾಮ ವಿಗ್ರಹ ಆಯ್ಕೆ ; ಕರ್ನಾಟಕದ ಮೂರ್ತಿಗೆ ಸ್ಥಾನ?

ABOUT THE AUTHOR

...view details