ಕರ್ನಾಟಕ

karnataka

ETV Bharat / bharat

ಜಾಗತಿಕ ಅಸ್ಥಿರತೆಯ ನಡುವೆ ಇಡೀ ವಿಶ್ವ ಭಾರತದ ಬಜೆಟ್‌ ಮೇಲೆ ಕಣ್ಣಿಟ್ಟಿದೆ: ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ

ಬಜೆಟ್​ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಶೋತ್ತರಕ್ಕೆ ಅನುಗುಣವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.

budget
ಪ್ರಧಾನಿ ಮೋದಿ ಭರವಸೆ

By

Published : Jan 31, 2023, 11:28 AM IST

Updated : Jan 31, 2023, 1:02 PM IST

ಬಜೆಟ್‌ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು

ನವದೆಹಲಿ:ಬಜೆಟ್​ ಅಧಿವೇಶನ ಶುರುವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದೇಶದ ಜನರ ಎಲ್ಲ ಆಶಯಗಳನ್ನು ಪೂರೈಸಲು ಪ್ರಯತ್ನಿಸಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಬಜೆಟ್​ ಅಧಿವೇಶನ ಆರಂಭಕ್ಕೂ ಮೊದಲು ಸಂಸತ್​ ಕಟ್ಟಡದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, "ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆಯೂ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ. ಜಗತ್ತಿನಲ್ಲಿ ಭಾರತದ ಆರ್ಥಿಕತೆ ಬೆಳಗಲಿದೆ. ಈ ನಿಟ್ಟಿನಲ್ಲಿ ಇಡೀ ವಿಶ್ವವೇ ದೇಶದ ಬಜೆಟ್‌ ಮೇಲೆ ಕಣ್ಣಿಟ್ಟಿದೆ" ಎಂದು ಹೇಳಿದರು.

"ಬಜೆಟ್ ಅಧಿವೇಶನಕ್ಕೂ ಮೊದಲು ವಿಶ್ವದ ಹಲವು ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಹೊಗಳಿವೆ. ಇದು ಸಕಾರಾತ್ಮಕ ಸಂದೇಶ, ಭರವಸೆಯ ಕಿರಣ ಮತ್ತು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ಪ್ರಮುಖವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ" ಎಂದರು.

"ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಮಾಡುವ ಮೊದಲ ಭಾಷಣವು ನಮ್ಮ ಸಂವಿಧಾನ ಮತ್ತು ವಿಶೇಷವಾಗಿ ಮಹಿಳೆಯರ ಗೌರವಕ್ಕೆ ಹೆಮ್ಮೆಯ ವಿಷಯ. ಇಡೀ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ. ಭಾರತ ಮೊದಲು, ಪ್ರಜೆ ಮೊದಲು ಎಂಬ ಚಿಂತನೆಯನ್ನು ತೆಗೆದುಕೊಂಡು ನಾವು ಸಂಸತ್ತಿನ ಪ್ರಸಕ್ತ ಬಜೆಟ್ ಅಧಿವೇಶನವನ್ನು ಶುರು ಮಾಡಲಿದ್ದೇವೆ. ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕು" ಎಂದು ಪ್ರಧಾನಿ ಹೇಳಿದರು.

"ನಮ್ಮ ಹಣಕಾಸು ಸಚಿವರೂ ಕೂಡ ಮಹಿಳೆಯಾಗಿದ್ದಾರೆ. ಅವರು ನಾಳೆ ದೇಶದ ಮುಂದೆ ಮತ್ತೊಂದು ಬಜೆಟ್ ಮಂಡಿಸುವರು. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಬಜೆಟ್‌ನತ್ತ ಚಿತ್ತ ಹರಿಸಿದೆ" ಎಂದು ಮೋದಿ ಹೇಳಿದರು.

ಇಂದು ಆರ್ಥಿಕ ಸಮೀಕ್ಷೆ ಮಂಡನೆ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಭಾರತದ ವಾರ್ಷಿಕ ಬಜೆಟ್ ​ಪೂರ್ವ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಭಾರತದ ಜಿಡಿಪಿ ದರ ಅಳೆಯುವ ಆರ್ಥಿಕ ಸಮೀಕ್ಷೆಯಾಗಿದ್ದು ಕುತೂಹಲ ಮೂಡಿಸಿದೆ. 2023-24 ನೇ ವರ್ಷಕ್ಕೆ ಶೇ.6-6.8 ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಸರ್ಕಾರ ಬೆಳವಣಿಗೆಯ ದರವನ್ನು ಪ್ರಸಕ್ತ ವರ್ಷ ಶೇ.6.5 ರ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜು:ಪ್ರತಿಪಕ್ಷಗಳೂ ಕೂಡ ಕೇಂದ್ರ ಸರ್ಕಾರದ ಹಲವು ವೈಫಲ್ಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ. ಅದಾನಿ ಬಗ್ಗೆ ಹಿಂಡೆನ್‌ಬರ್ಗ್ ವರದಿ, ಪಿಎಸ್‌ಯು ಬ್ಯಾಂಕ್‌ಗಳು ಎಲ್‌ಐಸಿ ಮೇಲೆ ಅದು ಬೀರಬಹುದಾದ ಪರಿಣಾಮ, ಬಿಬಿಸಿಯ ಸಾಕ್ಷ್ಯಚಿತ್ರ ನಿಷೇಧ, ರಾಷ್ಟ್ರವ್ಯಾಪಿ ಜಾತಿ ಆಧಾರಿತ ಆರ್ಥಿಕ ಜನಗಣತಿ, ಮಹಿಳಾ ಮೀಸಲಾತಿ ಮಸೂದೆಯ ಕುರಿತ ಚರ್ಚೆ ಸಂಸತ್ತಿನ ಬಿಸಿ ಏರಿಸಲಿದೆ.

ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನ ಏಪ್ರಿಲ್ 6 ರವರೆಗೆ 27 ದಿನಗಳ ಕಾಲ ನಡೆಯಲಿದೆ. ಮೊದಲ ಭಾಗವು ಫೆಬ್ರವರಿ 13 ರ ವರೆಗೆ ನಡೆದರೆ, ಬಳಿಕ ಎರಡನೇ ಕಂತು ಮಾರ್ಚ್ 12 ರಿಂದ ಶುರುವಾಗಲಿದೆ. ಏಪ್ರಿಲ್ 6 ಕ್ಕೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:ಇಂದಿನಿಂದ ಸಂಸತ್ತಿನ ಬಜೆಟ್​ ಅಧಿವೇಶನ: ರಾಷ್ಟ್ರಪತಿ ಭಾಷಣ, ಆರ್ಥಿಕ ಸಮೀಕ್ಷೆ ವರದಿ ಮಂಡನೆ

Last Updated : Jan 31, 2023, 1:02 PM IST

ABOUT THE AUTHOR

...view details