ಅಹಮದಾಬಾದ್(ಗುಜರಾತ್):ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅವರನ್ನು ಗುಜರಾತ್ನ ಅಹಮದಾಬಾದ್ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ಅವರ ಆರೋಗ್ಯ ವಿಚಾರಿಸಿ, ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಮಯ ಕಳೆದರು.
ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೆಹಲಿಯಿಂದ ಅಹಮದಾಬಾದ್ಗೆ ಆಗಮಿಸಿದರು. ಸಂಜೆ 4 ಗಂಟೆ ಸುಮಾರಿಗೆ ಅಹಮದಾಬಾದ್ ತಲುಪಿದ ಅವರು, ನೇರವಾಗಿ ಮೆಹ್ತಾ ಆಸ್ಪತ್ರೆಗೆ ಭೇಟಿ ನೀಡಿದರು. ಇಲ್ಲಿ ತಾಯಿಯ ಆರೋಗ್ಯ ವಿಚಾರಿಸಿದ ಪ್ರಧಾನಿ ವೈದ್ಯರೊಂದಿಗೆ ಚರ್ಚಿಸಿದರು. ನಂತರ 5:30ರ ಸುಮಾರಿಗೆ ಆಸ್ಪತ್ರೆಯಿಂದ ಅವರು ಮರಳಿ ಬಂದರು.
ಇದನ್ನೂ ಓದಿ:ಪ್ರಧಾನಿ ಕರೆ ಮಾಡಿದ್ದರು, ನಾವು ಚೆನ್ನಾಗಿದ್ದೇವೆ.. ಪ್ರಹ್ಲಾದ್ ದಾಮೋದರ್ ದಾಸ್ ಮೋದಿ
ಪ್ರಧಾನಿ ಆಸ್ಪತ್ರೆಗೆ ಭೇಟಿ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಿಎಂ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ. ಕೈಲಾಸನಾಥನ್, ಶಾಸಕರಾದ ದರ್ಶನಾಬೆನ್ ವಘೇಲಾ ಮತ್ತು ಕೌಶಿಕ್ ಜೈನ್ ಸಹ ಉಪಸ್ಥಿತರಿದ್ದರು. ಪ್ರಧಾನಿ ಆಗಮನದಿಂದಾಗಿ ಎಲ್ಲೆಡೆ ಅಲರ್ಟ್ ಘೋಷಿಸಲಾಗಿತ್ತು. ಅಹಮದಾಬಾದ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ, ಹೆಚ್ಚಿನ ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿತ್ತು.
ಇದೇ ವೇಳೆ, ಹೀರಾಬೆನ್ ಆರೋಗ್ಯದ ಬಗ್ಗೆ ಆಸ್ಪತ್ರೆಯವರು ಮಾಧ್ಯಮ ಪ್ರಕಟಣೆ ನೀಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಹಠಾತ್ ಆಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಹುಲ್ ಗಾಂಧಿ ಟ್ವೀಟ್:ಹೀರಾಬೆನ್ ಮೋದಿ ಅವರು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ತಾಯಿ ಮತ್ತು ಮಗನ ನಡುವಿನ ಪ್ರೀತಿ ಶಾಶ್ವತ ಮತ್ತು ಅಮೂಲ್ಯವಾದುದು. ಮೋದಿಜೀ, ಈ ಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗಿದೆ. ನಿಮ್ಮ ತಾಯಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಅಲ್ಲದೇ, ಪ್ರಿಯಾಂಕಾ ಗಾಂಧಿ ಸಹ ಟ್ವೀಟ್ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಅಸ್ವಸ್ಥರಾಗಿದ್ದಾರೆ. ಈ ಸಮಯದಲ್ಲಿ ನಾವೆಲ್ಲರೂ ಅವನೊಂದಿಗಿದ್ದೇವೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ವಿವಿಧ ರಾಜಕೀಯ ಪಕ್ಷದ ಪ್ರಮುಖರು ಸಹ ಪ್ರಧಾನಿ ತಾಯಿ ಅವರ ಆರೋಗ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ
ಮತ್ತೊಂದೆಡೆ, ಪ್ರಧಾನಿ ಮೋದಿ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಹಾಮೃತ್ಯುಂಜಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬನಾರಸ್‌ನ ದೇವಾಲಯದಲ್ಲಿ ಹವನ ಪೂಜೆಯನ್ನು ಮಾಡುವುದರೊಂದಿಗೆ ಹೀರಾಬೆನ್ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ವಾರಣಾಸಿಯ ಅಸ್ಸಿ ಘಾಟ್‌ನಲ್ಲಿರುವ ಪಗೋಡಾದಲ್ಲಿ ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.
ಜೂನ್ನಲ್ಲಿ ನೂರು ವಸಂತ ಪೂರೈಸಿದ್ದ ಹೀರಾಬೆನ್: ಹಿರಿಯ ಜೀವವಾಗಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್, ಇದೇ ವರ್ಷದ ಜೂನ್ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದರು. ಅಂದು ಸಹ ಮೋದಿ ಖುದ್ದು ಅಮ್ಮನನ್ನು ಭೇಟಿ ಮಾಡಿ, ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆದಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಮುಗಿದ ಗುಜರಾತ್ ವಿಧಾನಸಭೆ ಚುನಾವಣೆಗೂ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಹೀರಾಬೆನ್ ಅವರನ್ನು ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೀರಾಬೆನ್ ಅವರು ಗಾಲಿಕುರ್ಚಿಯ ಮೇಲೆ ಬಂದು ಮತ ಚಲಾಯಿಸಿದ್ದರು.
ಓದಿ:ಮಗುವಾಗದ ಕಾರಣ ಪತ್ನಿಯ ಕೈ ಕಾಲು ಮುರಿದ ಪಾಪಿ ಪತಿ.. ಮಹಿಳೆ ಸ್ಥಿತಿ ಗಂಭೀರ