ನವದೆಹಲಿ:ರೈತರ ಹಬ್ಬ ಮಕರ ಸಂಕ್ರಾಂತಿಯಾದ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ದೆಹಲಿಯ ನಿವಾಸದಲ್ಲಿ ಗೋವುಗಳಿಗೆ ಆಹಾರ ನೀಡಿದರು. ಹಸು ಮತ್ತು ಹೋರಿಗಳಿದ್ದ ರಾಸುಗಳಿಗೆ ಸಿಹಿ ತಿನಿಸು ಮತ್ತು ಹುಲ್ಲು ತಿನ್ನಿಸಿದರು. ನಿವಾಸದ ಉದ್ಯಾನದಲ್ಲಿ ರಾಸುಗಳೊಂದಿಗೆ ಕೆಲ ಸಮಯ ಕಳೆದ ಮೋದಿ, ಪ್ರೀತಿಯಿಂದ ಅವುಗಳನ್ನು ನೋಡಿಕೊಂಡರು.
ಗೋವುಗಳೊಂದಿಗೆ ಪ್ರಧಾನಿ ಮೋದಿ ಇದಕ್ಕೂ ಮೊದಲು, ಕೇಂದ್ರದ ರಾಜ್ಯ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪ್ರಧಾನಿ, ಪೊಂಗಲ್ ಸಿಹಿ ಖಾದ್ಯ ತಯಾರಿಸುವ ಪ್ರಕ್ರಿಯೆಯಲ್ಲೂ ಪಾಲ್ಗೊಂಡಿದ್ದರು.
ಇದಾದ ಬಳಿಕ ನಡೆದ ಕೆಲ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆನಂದಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳ್ಸೈ ಸೌಂದರರಾಜನ್ ಜೊತೆಗಿದ್ದರು.
ಬಾಲಕಿಗೆ ಶಾಲು ಉಡುಗೊರೆ:ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಸತ್ಯಂ ಶಿವಂ ಸುಂದರಂ' ಹಾಡನ್ನು ಮನಮುಟ್ಟುವಂತೆ ಹಾಡಿದ ಬಾಲಕಿಗೆ ಮೋದಿ ಅವರು ತಾವು ಧರಿಸಿದ್ದ ಶಾಲನ್ನು ಉಡುಗೊರೆಯಾಗಿ ನೀಡಿದರು. ವೇದಿಕೆಯ ಮೇಲೆ ಹಾಡು ಮುಗಿಸಿದ ಬಾಲಕಿ ತೆರಳುತ್ತಿದ್ದಾಗ ಆಕೆಯನ್ನು ತಾವೇ ಕೈ ಸನ್ನೆ ಮಾಡಿ ಸಮೀಪ ಕರೆದರು. ಅದ್ಭುತವಾಗಿ ಗಾಯನ ನಡೆಸಿಕೊಟ್ಟ ಬಾಲಕಿಗೆ ಮೆಚ್ಚುಗೆ ಸೂಚಿಸಿ ಶಾಲನ್ನು ಕೊರಳಿಗೆ ಹಾಕಿ ಶಹಬ್ಬಾಸ್ ಹೇಳಿದರು. ಬಾಲಕಿ ಪ್ರಧಾನಿ ಕಾಲಿಗೆರಗಿ ನಮಸ್ಕರಿಸಿದಳು.
ಏಕ ಭಾರತ ಶ್ರೇಷ್ಠ ಭಾರತದ ಪ್ರತೀಕ:ಬಳಿಕ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬವು ಏಕ ಭಾರತ ಶ್ರೇಷ್ಠ ಭಾರತದ ಭಾವನೆಯನ್ನು ಬಿಂಬಿಸುತ್ತದೆ. ದೇಶವು ನಿನ್ನೆ ಲೋಹ್ರಿ ಹಬ್ಬವನ್ನು ಆಚರಿಸಿತು. ಕೆಲವರು ಇಂದು ಮಕರ ಸಂಕ್ರಾಂತಿಯನ್ನು ಆಚರಿಸಿದರೆ, ಇನ್ನು ಕೆಲವರು ನಾಳೆ ಆಚರಿಸುತ್ತಾರೆ. ಮಾಘ ಬಿಹು ಹಬ್ಬ ಕೂಡ ಬರಲಿವೆ. ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಶಕ್ತಿಯಾಗಿವೆ. ಜನತೆಯ ಬಾಳಲ್ಲಿ ಹಬ್ಬಗಳು ಸುಖ, ಸಮೃದ್ಧಿ, ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.
ಗೋವುಗಳಿಗೆ ಹುಲ್ಲು ತಿನ್ನಿಸುತ್ತಿರುವ ಪ್ರಧಾನಿ
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ನಾನು ಸಂಬಂಧಿಕರೊಂದಿಗೆ ಹಬ್ಬ ಆಚರಣೆ ಮಾಡುತ್ತಿದ್ದೇನೆ ಎಂಬ ಭಾವನೆ ಬರುತ್ತಿದೆ. ನಿಮ್ಮೆಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳು ಎಂದು ತಮಿಳಿನಲ್ಲೇ ಹೇಳಿದರು. ಒಳ್ಳೆಯ ಫಸಲು, ವಿದ್ಯಾವಂತರು ಮತ್ತು ಪ್ರಾಮಾಣಿಕ ವ್ಯಾಪಾರಿಗಳು ಸೇರಿದರೆ ದೇಶ ನಿರ್ಮಾಣ ಸಾಧ್ಯ ಎಂದು ಕವಿ ತಿರುವಳ್ಳುವರ್ ಅವರ ಸಾಲನ್ನು ಉಚ್ಚರಿಸಿದರು.
ಇದನ್ನೂ ಓದಿ:ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ: ವಿಡಿಯೋ