ನವದೆಹಲಿ: ಮೇ 15ರಂದು ಐತಿಹಾಸಿಕ ಪ್ರಸಿದ್ಧ 'ಥಾಮಸ್ ಕಪ್' ಗೆಲ್ಲುವ ಮೂಲಕ ಭಾರತ ಹೊಸದೊಂದು ಇತಿಹಾಸ ನಿರ್ಮಿಸಿತ್ತು. ಈ ಹಿನ್ನೆಲೆ ಕ್ರೀಡಾಪಟುಗಳನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಚಾಂಪಿಯನ್ಗಳೊಂದಿಗೆ ಸಂವಾದ ನಡೆಸಿ, ಥಾಮಸ್ ಕಪ್ ಮತ್ತು ಉಬರ್ ಕಪ್‌ನ ಅನುಭವಗಳನ್ನು ಹಂಚಿಕೊಂಡರು.
ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಮತ್ತು ಉಬರ್ ಕಪ್‌ನ ಫೈನಲ್‌ನಲ್ಲಿ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿ ಇತಿಹಾಸ ಬರೆದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಲಕ್ಷ್ಯಸೇನ್, ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8ನೇ ಶ್ರೇಯಾಂಕದ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಸ್ಪೂರ್ತಿದಾಯಕ ಪ್ರಯತ್ನದೊಂದಿಗೆ ಎದುರಾಳಿಯ ವಿರುದ್ಧ ಪ್ರಬಲ ಪ್ರದರ್ಶನ ನೀಡಿದರು.
ಅಷ್ಟು ದೊಡ್ಡ ವೇದಿಕೆಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವಾಗ ನಿಮ್ಮ ಮನಸ್ಥಿತಿ ಹೇಗಿತ್ತು? ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಕಾಂತ್, "ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ, ಯಾವ ರೀತಿ ಆಟವಾಡಬೇಕು ಎಂಬುದರ ಕುರಿತು ನಾವು ನಮ್ಮೊಳಗೆ ಸಣ್ಣ ಚರ್ಚೆಗಳನ್ನು ನಡೆಸುತ್ತಿದ್ದೆವು. ಎಲ್ಲರೂ ಒಗ್ಗಟ್ಟಿನಿಂದ ಆಟವಾಡಿ ಗೆಲುವು ಸಾಧಿಸಬೇಕು ಎಂಬುದೇ ನಮ್ಮ ಗುರಿಯಾಗಿತ್ತು. ತಂಡದಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ನಾಯಕನಾಗಿ ನಾನು ಹೆಚ್ಚು ಮಾಡಬೇಕಾಗಿಲ್ಲ" ಎಂದರು.