ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು 350 ಕೋಟಿಗೂ ಹೆಚ್ಚು ನಗದು ಹಾಗೂ ಸುಮಾರು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಣಿಕೆಗೆ ಸಿಗದಷ್ಟು ನಗದು ದೊರಕಿರುವ ಈ ಪ್ರಕರಣವನ್ನು ಪ್ರಸಿದ್ಧ ವೆಬ್ ಸಿರೀಸ್ 'ಮನಿ ಹೀಸ್ಟ್' ಗೆ ಹೋಲಿಸಿರುವ ಪ್ರಧಾನಿ ಮೋದಿ, ಎಕ್ಸ್ನಲ್ಲಿ ಪೋಸ್ಟ್ನಲ್ಲಿ, "ಕಳೆದ 70 ವರ್ಷಗಳಿಂದ ಭಾರತದಲ್ಲಿ ಕಾಂಗ್ರೆಸ್ ದರೋಡೆ ಮಾಡುತ್ತಿರುವಾಗ, ಯಾರಿಗೆ ಬೇಕು ಈ 'ಮನಿ ಹೀಸ್ಟ್' ಕಾಲ್ಪನಿಕ ಕಥೆ" ಎಂದು ಟಾಂಗ್ ಕೊಟ್ಟಿದ್ದಾರೆ. ಪೋಸ್ಟ್ ಜೊತೆಗೆ ಬಿಜೆಪಿ ತನ್ನ ಖಾತೆಯಲ್ಲಿ 'ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್' ಎನ್ನುವ ಕ್ಯಾಪ್ಷನ್ನೊಂದಿಗೆ ಹಂಚಿಕೊಂಡಿರುವ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಸಂಸದ ಧೀರಜ್ ಸಾಹುಗೆ ಸಂಬಂಧಿಸಿದ ಒಡಿಶಾ ಮೂಲದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಕಚೇರಿಗಳ ಮೇಲೆ ಹಾಗೂ ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಡಿಸೆಂಬರ್ 6ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಲೆಕ್ಕಕ್ಕೆ ಸಿಗದಷ್ಟು ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದಾಳಿಯ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.