ಕಾನ್ಪುರ(ಯು.ಪಿ):ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ವಿನಾಕಾರಣ ಅಡ್ಡಿ ಉಂಟು ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅಲ್ಲದೇ, ಪ್ರತಿಪಕ್ಷಗಳಿಗೆ ಸಮಾಜದ ಹಿತಾಸಕ್ತಿಗಿಂತ ರಾಜಕೀಯ ಹಪಾಹಪಿಯೇ ಹೆಚ್ಚಾಗಿದೆ ಎಂದು ಟೀಕಿಸಿದರು.
ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ಮೋಹನ್ ಅವರ 10ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ವಿರೋಧ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಅವುಗಳನ್ನು ದಿಟ್ಟತನದಿಂದ ಅನುಷ್ಠಾನ ಮಾಡುತ್ತಿದೆ. ಇದಕ್ಕೂ ಪ್ರತಿಪಕ್ಷಗಳು ತೊಡರುಗಾಲು ಹಾಕುತ್ತಿರುವುದು ನೋವಿನ ಸಂಗತಿ ಎಂದರು.
ರಾಜಕಾರಣಕ್ಕಿಂತ ರಾಷ್ಟ್ರ ಮೊದಲು:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ಪಕ್ಷ ರಾಜಕಾರಣಕ್ಕಿಂತ ರಾಷ್ಟ್ರದ ಅಭ್ಯುದಯ ಮುಖ್ಯ ಎಂಬುದನ್ನು ಅರಿಯಬೇಕು. ನೀವು(ಪ್ರತಿಪಕ್ಷಗಳು) ಕೈಗೊಳ್ಳದ ನಿರ್ಧಾರಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ವಿರೋಧಿಸಿ ಜನರ ದೃಷ್ಟಿಗೆ ಬೀಳಬೇಡಿ. ಇದನ್ನು ಜನರು ಇಷ್ಟಪಡುವುದಿಲ್ಲ ಎಂದು ಸಲಹೆ ನೀಡಿದರು.