ಜೈಪುರ (ರಾಜಸ್ಥಾನ) :ಮುಂಬರುವವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಕಲ್ಲು ತೂರಾಟ, ಗಲಭೆ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕಾನೂನು ಉಲ್ಲಂಘನೆಯಿಂದ ರಾಜ್ಯವನ್ನು ರಕ್ಷಿಸಬೇಕಿದೆ. ಹೀಗಾಗಿ ಬಿಜೆಪಿಯನ್ನು ಗೆಲ್ಲಿಸಿ" ಎಂದು ಅವರು ಮನವಿ ಮಾಡಿದರು.
ಚಿತ್ತೋರ್ಗಢದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ಬೊಕ್ಕಸ ತುಂಬುವ ಕೆಲಸ ಮಾಡುತ್ತಿರುವ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ವೀರಯೋಧರಾದ ಮಹಾರಾಣಾ ಪ್ರತಾಪ್ ಮತ್ತು ರಾಣಿ ಪದ್ಮಿನಿಯ ನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪುಣ್ಯಭೂಮಿಯಲ್ಲಿ ಕಲ್ಲು ತೂರಾಟ, ಗಲಭೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದನ್ನೆಲ್ಲಾ ಮಟ್ಟಹಾಕುವ ಕಾಲ ಸನ್ನಿಹಿತವಾಗಿದೆ" ಎಂದು ಹೇಳಿದರು.
"ಸೋಲೊಪ್ಪಿಕೊಂಡ ಸಿಎಂ ಗೆಹ್ಲೋಟ್":"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಯಾವುದೇ ಯೋಜನೆಯನ್ನು ನಿಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಸಿಎಂ ಅಶೋಕ್ ಗೆಹ್ಲೋಟ್ ಅವರು ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವುಗಳನ್ನು ಇನ್ನಷ್ಟು ಸುಧಾರಣೆ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.
"ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈಗಾಗಲೇ ಯೋಜನೆಗಳ ವಿಚಾರವಾಗಿ ನಿಲ್ಲಿಸದಂತೆ ವಿನಂತಿಸಿಕೊಂಡಿದ್ದಾರೆ. ಇದರರ್ಥ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಮೊದಲೇ ಗ್ರಹಿಸಿದ್ದಾರೆ. ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸಾರ್ವಜನಿಕವಾಗಿ ಕೇಳಿಕೊಳ್ಳುವ ಮೂಲಕ ಅವರು ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಯೋಜನೆಯನ್ನು ಬಿಜೆಪಿ ನಿಲ್ಲಿಸುವುದಿಲ್ಲ" ಎಂದು ಅಭಯ ನೀಡಿದರು.