ನವದೆಹಲಿ: ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭಾಗಿಯಾದರು. ಈ ವೇಳೆ ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ 3.2 ಲಕ್ಷ ಕೋಟಿ ರೂ.(42 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಜಪಾನ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
2018ರ ಬಳಿಕ ಭಾರತ-ಜಪಾನ್ ನಡುವೆ 14ನೇ ಶೃಂಗಸಭೆ ನಡೆದಿದ್ದು, ಈ ವೇಳೆ ಉಭಯ ದೇಶದ ನಾಯಕರು ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುವ ದೇಶಗಳ ಪೈಕಿ ಜಪಾನ್ ಕೂಡ ಒಂದಾಗಿದ್ದು, ಈಗಾಗಲೇ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ನಲ್ಲಿ ಭಾರತದ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಗತಿ, ಸಮೃದ್ಧಿ ಮತ್ತು ಪಾಲುದಾರಿಕೆಯಲ್ಲಿ ಭಾರತ-ಜಪಾನ್ ಸಂಬಂಧ ಗಟ್ಟಿಯಾಗಿದ್ದು, ದೇಶದಲ್ಲಿರುವ ಜಪಾನ್ನ ಎಲ್ಲ ಕಂಪನಿಗಳಿಗೆ ಸಾಧ್ಯವಾಗುವಷ್ಟು ಬೆಂಬಲ ನೀಡಲು ನಾವು ಸಿದ್ಧರಾಗಿದ್ದೇವೆ. ಜಪಾನ್ ಪ್ರಧಾನಿ ಕಿಶಿಡಾ ಭಾರತದ ಹಳೆಯ ಸ್ನೇಹಿತರಾಗಿದ್ದು, ಈ ಹಿಂದೆ ಅವರು ಜಪಾನ್ ವಿದೇಶಾಂಗ ಸಚಿವರಾಗಿದ್ದ ವೇಳೆ ಅನೇಕ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎಂದರು.