ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಗೆ 73ನೇ ಜನ್ಮದಿನ. ದೇಶ-ವಿದೇಶಗಳಲ್ಲಿ ಅಭಿಮಾನಿಗಳು, ಬೆಂಬಲಿಗರು ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಪಶ್ಚಿಮ ಭಾಗದ ಗುಜರಾತ್ ರಾಜ್ಯದ ಪುಟ್ಟ ಹಳ್ಳಿಯಿಂದ ಬಂದ ಮೋದಿ ಭಾರತದ ಪ್ರಧಾನಿ ಗಾದಿಗೇರಿರುವುದು ಮಾತ್ರವಲ್ಲದೆ ಇಂದು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ.
ಮೋದಿ ಪ್ರಧಾನಿಯಾದ ನಂತರ ತಮ್ಮ ಜನ್ಮದಿನವನ್ನು ಪ್ರತಿವರ್ಷ ವಿಭಿನ್ನವಾಗಿ, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾದ ಭವ್ಯ 'ಯಶೋಭೂಮಿ' ಸಮಾವೇಶ ಕೇಂದ್ರ ಉದ್ಘಾಟಿಸಲಿದ್ದಾರೆ. ಇದು ಬೃಹತ್ ಮುಖ್ಯ ಸಭಾಂಗಣ, 15 ಕನ್ವೆನ್ಶನ್ ಕೊಠಡಿಗಳು ಮತ್ತು ವಿಶೇಷವಾದ ಬಾಲ್ ರೂಂ ಹೊಂದಿದೆ. 11,000 ಪ್ರತಿನಿಧಿಗಳಿಗೆ ಇಲ್ಲಿ ವಸತಿ ಸೌಲಭ್ಯವಿದೆ. ‘ಯಶೋಭೂಮಿ’ಯಲ್ಲಿ ಪಾರ್ಕಿಂಗ್, ಭದ್ರತೆ ಹೀಗೆ ಎಲ್ಲ ಮಾನದಂಡಗಳ ಬಗ್ಗೆಯೂ ವಿಶೇಷ ಕಾಳಜಿವಹಿಸಿ ನಿರ್ಮಿಸಲಾಗಿದೆ.
ಮೋದಿ ಹಾದಿ: ನರೇಂದ್ರ ಮೋದಿ 17 ಸೆಪ್ಟೆಂಬರ್ 1950 ರಂದು ಗುಜರಾತ್‌ನ ಮಹೇಸನಾ ಜಿಲ್ಲೆಯ ವಡ್‌ನಗರ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 1972 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಸೇರಿದರು. ಸ್ವಯಂಸೇವಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1978 ರಲ್ಲಿ ಉತ್ತಮ ಕಾರ್ಯಕ್ಕೆ ವಡೋದರದಲ್ಲಿ ಇಲಾಖಾ ಪ್ರಚಾರಕನ ಜವಾಬ್ದಾರಿ ನೀಡಲಾಯಿತು. 1980 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ದಕ್ಷಿಣ ಗುಜರಾತ್ ಮತ್ತು ಸೂರತ್ ವಿಭಾಗಗಳ ಪ್ರಚಾರಕ ಹೊಣೆ ಅರಸಿಬಂತು. 1987ರಲ್ಲಿ ಬಿಜೆಪಿ ಸೇರಿ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.