ಲಖನೌ (ಉತ್ತರ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯೆ ಭೇಟಿಗೆ ದಾಳಿ ಭೀತಿ ಇದೆ ಎಂದು ಗುಪ್ತಚರ ಸಂಸ್ಥೆಗಳು ಹೈ ಅಲರ್ಟ್ ನೀಡಿದ್ದು, ಅಂದಿನ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಿಗಿ ಭದ್ರತೆ ಒದಗಿಸಲು ಭದ್ರತಾ ಪಡೆಗಳು ಕ್ರಮ ವಹಿಸಿವೆ. ವಿದೇಶದಲ್ಲಿದ್ದುಕೊಂಡು ಭಾರತಕ್ಕೆ ಬೆದರಿಕೆ ಒಡ್ಡುತ್ತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಮೋದಿ ರ್ಯಾಲಿ ವೇಳೆ ದಾಳಿ ಮಾಡಲು ಉತ್ತರಪ್ರದೇಶದಲ್ಲಿ ಕೆಲವರಿಗೆ ಆತ ಕರೆ ನೀಡಿದ್ದಾನೆ.
ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ಪ್ರವಾಸ ಕೈಗೊಳ್ಳಲಿದ್ದು, ನವೀಕರಿಸಲಾದ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ 15 ಕಿ.ಮೀ ಉದ್ದ ರೋಡ್ ಶೋ ಕೂಡ ನಡೆಸಲಿದ್ದಾರೆ. ಅಂದು ಒಟ್ಟು ಮೂರು ಗಂಟೆಗಳ ಕಾಲ ಅವರು ಅಯೋಧ್ಯೆಯಲ್ಲಿರಲಿದ್ದಾರೆ.
ಭದ್ರತಾ ಪಡೆಗಳ ಸರ್ಪಗಾವಲು:ದಾಳಿ ಭೀತಿ ಹಿನ್ನೆಲೆ ಅಯೋಧ್ಯೆಯಲ್ಲಿ ತೀವ್ರ ನಿಗಾ ವಹಿಸಲು ಗುಪ್ತಚರ ಇಲಾಖೆಗಳು ಗಮನ ಹರಿಸಿವೆ. ಎನ್ಎಸ್ಜಿ, ಎಟಿಎಸ್, ಎಸ್ಟಿಎಫ್ ಕಮಾಂಡೋಗಳ ಪಡೆಯನ್ನು ನಿಯೋಜಿಸಲಾಗಿದೆ. ಭದ್ರತೆ ವಿಚಾರದಲ್ಲಿ ಲೋಪವಾಗದಂತೆ ಈ ಎಲ್ಲಾ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆಯನ್ನು ಸಿದ್ಧಪಡಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಮೂವರು ಡಿಐಜಿಗಳು, 17 ಎಸ್ಪಿಗಳು, 40 ಎಎಸ್ಪಿಗಳು, 82 ಡೆಪ್ಯುಟಿ ಎಸ್ಪಿಗಳು, 90 ಇನ್ಸ್ಪೆಕ್ಟರ್ಗಳು, 325 ಸಬ್ ಇನ್ಸ್ಪೆಕ್ಟರ್ಗಳು, 33 ಮಹಿಳಾ ಎಸ್ಐಗಳು, 2000 ಕಾನ್ಸ್ಟೇಬಲ್ಗಳು, 450 ಟ್ರಾಫಿಕ್ ಪೊಲೀಸ್ ಸಿಬ್ಬಂದಿ, 14 ಕಂಪನಿ ಪಿಎಸಿ ಮತ್ತು 6 ಕಂಪನಿಗಳ ಅರೆಸೇನಾ ಪಡೆಗಳನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ.
ಜನವರಿ 22 ರಂದು ಭವ್ಯ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಜರುಗಲಿದ್ದು, ಅದಕ್ಕೂ ಮೊದಲು ಮೂಲಸೌಕರ್ಯಗಳ ಉದ್ಘಾಟನಾ ಕಾರ್ಯಗಳನ್ನು ಮುಗಿಸಲಾಗುತ್ತಿದೆ. ಇದರ ಭಾಗವಾಗಿ ವಿಮಾನ, ರೈಲು ನಿಲ್ದಾಣಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಭದ್ರತಾ ಪಡೆಗಳ ಕಂಟೋನ್ಮೆಂಟ್ ನಿರ್ಮಿಸಲಾಗಿದೆ. ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಭದ್ರತಾ ಲೋಪ ಮತ್ತು ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿಯೂ ಭದ್ರತಾ ಎಚ್ಚರಿಕೆ ವಹಿಸಲಾಗಿದೆ.
ಉಗ್ರ ಪನ್ನು ಬೆದರಿಕೆ ಕರೆ:ಭಾರತೀಯ ಮೂಲದ ಖಲಿಸ್ಥಾನ್ ಉಗ್ರ ಪನ್ನು, ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಇದರಲ್ಲಿ ಅಯೋಧ್ಯೆಯಲ್ಲಿ 15 ಕಿ.ಮೀ ಉದ್ದ ನಡೆಯುವ ಪ್ರಧಾನಿ ಮೋದಿ ಅವರ ಬೃಹತ್ ರ್ಯಾಲಿಯ ಮೇಲೆ ದಾಳಿ ಮಾಡಲು ಕರೆ ನೀಡಿದ್ದಾನೆ. ಇದರ ಬೆನ್ನಲ್ಲೇ ಗುಪ್ತಚರ ಪಡೆಗಳು ಭದ್ರತಾ ಹೈಅಲರ್ಟ್ ನೀಡಿವೆ.
ಇದನ್ನೂ ಓದಿ:ಅಯೋಧ್ಯೆ ವಿಮಾನ ನಿಲ್ದಾಣದ ಮೊದಲ ಹಂತ ಡಿಸೆಂಬರ್ 15ಕ್ಕೆ ಉದ್ಘಾಟನೆ: ಸಿಎಂ ಆದಿತ್ಯನಾಥ್