ಚಂಡೀಗಢ(ಪಂಜಾಬ್):ಪಂಜಾಬ್‌ನ ಫಿರೋಜ್ಪುರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಕುರಿತಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಇದೀಗ ಪಂಜಾಬ್ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಪಂಜಾಬ್ನಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮಾತನಾಡುವ ಕ್ಯಾ.ಅಮರೀಂದರ್ ಸಿಂಗ್ ನಿಮ್ಮ 'ಗಿಣಿ'(ಕೇಂದ್ರದ) ಇದ್ದಹಾಗೆ ಎಂದಿದ್ದಾರೆ.
ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಪಂಜಾಬ್‌ನ ಚನ್ನಿ ಸರ್ಕಾರದ ನಡೆ ಸಮರ್ಥಿಸಿಕೊಂಡಿರುವ ಸಿಧು, ಕಳೆದ ಎರಡು ದಿನಗಳಿಂದ ಭದ್ರತೆ ಬಗ್ಗೆ ಕೆಲ ಬುದ್ಧಿಹೀನರು ಮಾತನಾಡುತ್ತಿದ್ದಾರೆ. ಅದರಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಒಬ್ಬರು. ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ, ಬೆಂಬಲವೂ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಸಿಧು, 7,000 ಕುರ್ಚಿ ಹಾಕಲಾಗಿದ್ದ ಸಭೆಯಲ್ಲಿ ಕೇವಲ 500 ಜನರು ಕುಳಿತುಕೊಂಡಿದ್ದರು. ಇಂತಹ ಸಭೆಯಲ್ಲಿ ಪ್ರಧಾನಿ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.