ಕರ್ನಾಟಕ

karnataka

ETV Bharat / bharat

ಆತ್ಮಹತ್ಯಾ ದಾಳಿ ಬೆದರಿಕೆ ನಡುವೆ ಸೋಮವಾರ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ

ಆತ್ಮಹತ್ಯಾ ದಾಳಿ ಬೆದರಿಕೆ ಪತ್ರ ರವಾನೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಸೋಮವಾರ ಕೇರಳಕ್ಕೆ ಭೇಟಿ ನೀಡಲಿದ್ದಾರೆ.

ನಾಳೆ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ
ನಾಳೆ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ

By

Published : Apr 23, 2023, 1:27 PM IST

ತಿರುವನಂತಪುರಂ (ಕೇರಳ):ಆತ್ಮಹತ್ಯಾ ದಾಳಿ ಬೆದರಿಕೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಸೋಮವಾರ) ಕೇರಳಕ್ಕೆ ಭೇಟಿ ನೀಡಲಿದ್ದಾರೆ. ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಉದ್ಘಾಟನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇರಳ ಬಿಜೆಪಿ ನಾಯಕ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ ಕೆ ಕೃಷ್ಣದಾಸ್, ಪ್ರಧಾನಿ ನರೇಂದ್ರ ಮೋದಿಯವರ ಕೇರಳ ಭೇಟಿ ರಾಜ್ಯದಲ್ಲಿನ ಕೆಲವರಿಗೆ ಸಮಸ್ಯೆ ತಂದೊಡ್ಡಿದೆ. ಪ್ರಧಾನಿ ಭೇಟಿ ವೇಳೆ ನಿಯೋಜಿಸಲಾಗಿದ್ದ ಭದ್ರತೆಯ ವಿಚಾರವೂ ಸೋರಿಕೆಯಾಗಿದೆ. ಆದರೂ, ಪ್ರಧಾನಿ ಅವರ ಭೇಟಿಯನ್ನು ರದ್ದುಗೊಳಿಸುವುದಿಲ್ಲ. ರಾಜ್ಯ ಸರ್ಕಾರ ಆದ ಪ್ರಮಾದದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದರು.

ಪ್ರಧಾನಿಯವರ ಕೇರಳ ಭೇಟಿಯು ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಅವರು ನಡೆಸುವ ಸಾರ್ವಜನಿಕ ಸಭೆಗಳು ಮತ್ತು ಸಂವಾದಗಳು ಪ್ರಭಾವ ಬೀರಬಹುದು. ಯುವಕರಲ್ಲಿ ಪ್ರಮುಖ ಪ್ರಭಾವ ಬೀರಬಹುದು ಎಂಬುದು ವಿರೋಧಿಗಳಿಗೆ ಇರುವ ಭಯವಾಗಿದೆ. ರಾಜ್ಯದಲ್ಲಿ ಮೊದಲಿಗಿಂತ ಪರಿಸ್ಥಿತಿ ಭಿನ್ನವಾಗಿದೆ. ಎಲ್‌ಡಿಎಫ್ ಮತ್ತು ಕಾಂಗ್ರೆಸ್ ಪಕ್ಷಗಳು ಯುವಕರನ್ನು ಒಟ್ಟುಗೂಡಿಸಲು ಇದೇ ರೀತಿಯ ಕಾರ್ಯತಂತ್ರಗಳನ್ನು ನಡೆಸುತ್ತಿವೆ. ಅಂದರೆ ಬಿಜೆಪಿ ಮತ್ತು ಎನ್‌ಡಿಎ ಇಲ್ಲಿ ಪ್ರಭಾವವನ್ನು ಸೃಷ್ಟಿಸುತ್ತಿದೆ ಎಂದರ್ಥ ಎಂದು ಅಭಿಪ್ರಾಯಪಟ್ಟರು.

ಕಮ್ಯುನಿಸ್ಟ್​ ಸರ್ಕಾರವಿದ್ದ ತ್ರಿಪುರಾದಂತೆ ಕೇರಳದಲ್ಲೂ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇರಳ ಭೇಟಿಗಾಗಿ ಪ್ರಧಾನಿಗೆ ನೀಡಲಾಗಿದ್ದ ಭದ್ರತಾ ಯೋಜನೆಯನ್ನೂ ಸೋರಿಕೆ ಮಾಡಲಾಗಿದೆ. ಇದು ದೃಢಪಟ್ಟ ಬೆನ್ನಲ್ಲೇ ಪೊಲೀಸರು ಹೊಸ ಭದ್ರತಾ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ. ಅತ್ಯಂತ ಗೌಪ್ಯವಾಗಿರಬೇಕಿದ್ದ ಭದ್ರತಾ ದಾಖಲೆ ಸೋರಿಕೆಯಾದ ಕುರಿತು ತನಿಖೆ ಪ್ರಾರಂಭಿಸಲಾಗಿದೆ.

ಬೆದರಿಕೆ ಪತ್ರ ರವಾನೆ:ಪ್ರಧಾನಿ ನರೇಂದ್ರ ಮೋದಿಯವರ ಕೇರಳ ಪ್ರವಾಸದ ವೇಳೆ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಪರಿಚಿತ ವ್ಯಕ್ತಿ ಹೆಸರಿನಲ್ಲಿ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರ ಬಂದಿದೆ. ಇದೇ ವೇಳೆ ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ವಿವರವೂ ಸೋರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ರಾಜ್ಯ ಪೊಲೀಸರಿಂದ ಆದ ಗಂಭೀರ ಭದ್ರತಾ ಲೋಪ ಎಂಬ ಟೀಕೆ ವ್ಯಕ್ತವಾಗಿದೆ.

ಪ್ರಧಾನಿ ಕೇರಳ ಪ್ರವಾಸ ಹೀಗಿದೆ:ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಿಂದ ವಿಶೇಷ ವಾಯುಪಡೆಯ ವಿಮಾನದಲ್ಲಿ ಕೇರಳಕ್ಕೆ ಆಗಮಿಸಿ, ಬಿಜೆಪಿ ರೋಡ್‌ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ತೇವರ ಸೇಕ್ರೆಡ್ ಹಾರ್ಟ್ ಕಾಲೇಜು ಮೈದಾನದಲ್ಲಿ ಬಿಜೆಪಿ ನೇತೃತ್ವದ ಯುವ ಸಂಘಟನೆಗಳು ಆಯೋಜಿಸಿರುವ 'ಯುವಂ' ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಮಂಗಳವಾರ ಬೆಳಗ್ಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಬಳಿಕ ಸೆಂಟ್ರಲ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಇದೇ ವೇಳೆ 4 ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿರುವ ಮೋದಿ, ಟೆಕ್ನೋ ಸಿಟಿಗೆ ಶಂಕುಸ್ಥಾಪನೆ ಮತ್ತು ಕೊಚ್ಚಿ ವಾಟರ್ ಮೆಟ್ರೋಗೂ ಚಾಲನೆ ನೀಡಲಿದ್ದಾರೆ.

ಓದಿ:ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ಪೊಲೀಸರ ಭದ್ರತಾ ವಿವರವೂ ಸೋರಿಕೆ

ABOUT THE AUTHOR

...view details