ನವದೆಹಲಿ:ಒಪ್ಪಿಗೆ ಸೂಚ್ಯಂಕದಲ್ಲಿವಿಶ್ವದ 13 ನಾಯಕರ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್ ಎಂದು ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತಿಳಿಸಿದೆ. ವಾರಕ್ಕೊಮ್ಮೆ ಪ್ರಕಟಿಸುವ ಈ ಸಮೀಕ್ಷೆಯನ್ನು ಸೆಪ್ಟೆಂಬರ್ 2 ರಂದು ಪ್ರಕಟಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಶೇಕಡಾ 70 ರಷ್ಟು ವೋಟಿಂಗ್ ಪಡೆದಿದ್ದಾರೆ. ಮೋದಿಗೆ ಅತ್ಯಂತ ಕಡಿಮೆ ಅಸಮ್ಮತಿ ರೇಟಿಂಗ್ ಬಂದಿದ್ದು, 100 ಜನರ ಪೈಕಿ ಕೇವಲ 25 ಮಂದಿ ಅವರನ್ನು ಅಸಮ್ಮತಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊಗೆ ಹಿನ್ನಡೆಯಾಗಿದೆ.
ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡ ಹಾಗೂ ಕಾಬೂಲ್ನಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಬೈಡನ್ಗೆ ಹಿನ್ನಡೆಯಾಗಿದ್ದು, ಶೇಕಡಾ 40 ರಷ್ಟು ವೋಟಿಂಗ್ ಪಡೆದಿದ್ದಾರೆ.
2019 ರ ಆಗಸ್ಟ್‌ನಲ್ಲಿ ಮೋದಿಯವರ ಅನುಮೋದನೆ ರೇಟಿಂಗ್ ಶೇಕಡಾ 82 ರಷ್ಟಿತ್ತು. ಈ ವರ್ಷದ ಜೂನ್‌ನಲ್ಲಿ ಶೇಕಡಾ 66 ಕ್ಕೆ ಇಳಿದಿತ್ತು. ಕಳೆದೆರಡು ತಿಂಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು ಮತ್ತು ಬಿರುಸಿನ ವ್ಯಾಕ್ಸಿನೇಷನ್ ನಡೆಯುತ್ತಿರುವುದರಿಂದ ಅವರ ರೇಟಿಂಗ್ ಹೆಚ್ಚಾಗಿದೆ.
ಮಾರ್ನಿಂಗ್ ಕನ್ಸಲ್ಟ್ ಎಂಬ ಜಾಗತಿಕ ಡೇಟಾ ಇಂಟೆಲಿಜೆನ್ಸ್ ಕಂಪನಿಯನ್ನು 2014 ರಲ್ಲಿ ಖಾಸಗಿ ವ್ಯಕ್ತಿಗಳು ಆರಂಭಿಸಿದರು. ಇದನ್ನು 2018 ಮತ್ತು 2019 ರಲ್ಲಿ ಉತ್ತರ ಅಮೆರಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕಂಪನಿಗಳಲ್ಲಿ ಒಂದೆಂದು ಹೆಸರಿಸಲಾಯಿತು. ಈ ಕಂಪನಿಯು ಜಾಗತಿಕ ನಾಯಕರು ಕೈಗೊಳ್ಳುವ ನಿರ್ಧಾರಗಳು, ಅವರ ಬುದ್ಧಿವಂತಿಕೆ, ಜಾರಿಗೆ ತರುವ ಯೋಜನೆಗಳ ಮೇಲೆ ಅವರ ಸ್ಥಾನವನ್ನು (Rating) ನಿರ್ಧರಿಸುತ್ತದೆ.