ನವದೆಹಲಿ (ಭಾರತ) :ದೇಶ ಸ್ವಾತಂತ್ರ್ಯೋತ್ಸವ ಅಮೃತೋತ್ಸವದಲ್ಲಿದ್ದು, ಕಳೆದ ವರ್ಷದಂತೆ ಈ ಬಾರಿಯೂ 'ಹರ್ ಘರ್ ತಿರಂಗಾ ಅಭಿಯಾನ' ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಜಾಗದಲ್ಲಿ (ಡಿಪಿ) ತ್ರಿವರ್ಣ ಧ್ವಜದ ಚಿತ್ರವನ್ನು ಅಳವಡಿಸಲೂ ಕರೆ ನೀಡಿದ್ದು, ಸ್ವತಃ ಅವರು ತಮ್ಮ ಭಾವಚಿತ್ರವನ್ನು ಬದಲಿಸಿದ್ದಾರೆ.
#HarGharTiranga ಆಂದೋಲನದ ಭಾಗವಾಗಿ ನಾವು ಬಳಸುವ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಯನ್ನು ಬದಲಾಯಿಸೋಣ. ಪ್ರೀತಿಯ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಇಂದಿನಿಂದ ಅಂದರೆ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ' ಆಂದೋಲನದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ಎರಡು ದಿನಗಳ ಹಿಂದೆ ಕರೆ ನೀಡಿದ್ದರು.
ಧ್ವಜದ ಜೊತೆಗಿನ ಫೋಟೋ ಹಂಚಿಕೊಳ್ಳಿ :ಭಾರತದ ಧ್ವಜವು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಸಂಕೇತಿಸುತ್ತದೆ. ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಾಡಿಸಿ, ಅದರ ಜೊತೆಗೆ ಒಂದು ಫೋಟೋ ತೆಗೆದುಕೊಂಡು https://harghartiranga.com ವೆಬ್ಸೈಟ್ನಲ್ಲಿ ಹಂಚಿಕೊಳ್ಳಿ. ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಪರ್ಕ ಮತ್ತು ಇನ್ನಷ್ಟು ರಾಷ್ಟ್ರದ ಪ್ರಗತಿಗೆ ಶ್ರಮಿಸಲು ಅದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಸಾವಿರಾರು ಅತಿಥಿಗಳಿಗೆ ಆಹ್ವಾನ:ನಾಡಿದ್ದು ನಡೆಯುವ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ 1800 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ 50 ಕ್ಕೂ ಅಧಿಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರೂ ಇದ್ದಾರೆ. ಅವರು ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.