ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 71ನೇ ವರ್ಷಕ್ಕೆ ಕಾಲಿಟ್ಟಿದ್ದು, ಗಣ್ಯಾತಿಗಣ್ಯರು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಈ ದಿನವನ್ನು ಐತಿಹಾಸಿಕ ದಿನವನ್ನಾಗಿಸಲು ಬಿಜೆಪಿ ಇಂದಿನಿಂದ 21 ದಿನಗಳ ಕಾಲ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ಆರಂಭಿಸುತ್ತಿದೆ.
ಗುಜರಾತ್ನಲ್ಲಿ ದೀರ್ಘ ಅವಧಿಗೆ ಸಿಎಂ ಆಗಿ ನಮೋ ಸೇವೆ
ಪ್ರಧಾನಿ ಮೋದಿ 2001ರ ಅಕ್ಟೋಬರ್ನಿಂದ 2014ರ ಮೇ ವರೆಗೆ ಗುಜರಾತ್‌ನ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದರು. ಬಳಿಕ ಲೋಕಸಭೆ ಪ್ರವೇಶಿಸಿದ ಅವರು, 2014 ರಲ್ಲಿ ಬಿಜೆಪಿ ಪಕ್ಷವು ಅಭೂತ ಪೂರ್ವ ಗೆಲುವು ಸಾಧಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿದರು. 2019 ರಲ್ಲಿಯೂ ಸಂಪೂರ್ಣ ಬಹುಮತ ಪಡೆದ ಬಳಿಕ ಎರಡನೇ ಅವಧಿಗೆ ಪ್ರಧಾನಿಯಾದರು.
ಎರಡನೇ ಅವಧಿಗೂ ಪ್ರಧಾನಿ, ಭ್ರಷ್ಟಾಚಾರ ರಹಿತ ಆಡಳಿತ
2014 ರಿಂದ 2019 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರ 2019 ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ಮೋದಿ ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಮೂರನೇ ವರ್ಷದಲ್ಲಿದ್ದಾರೆ. ಅವರ ಆಡಳಿತದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಧ್ಯೇಯ ವಾಕ್ಯವನ್ನು ಅವರು ಪದೇ ಪದೆ ಒತ್ತಿ ಹೇಳಿದ್ದಾರೆ. ಮೋದಿಯು, ದೇಶದಲ್ಲಿ ಅಭಿವೃದ್ಧಿ ಆಧಾರಿತ ಮತ್ತು ಭ್ರಷ್ಟಾಚಾರ ರಹಿತ ಆಡಳಿತವನ್ನು ಸ್ಥಾಪಿಸಲು ಶ್ರಮಿಸಿದರು.
ಜನ ಸೇವೆಯೇ ಜನಾರ್ದನ ಸೇವೆ
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವಾರು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ‘ಆಯುಷ್ಮಾನ್ ಭಾರತ್’ಇದು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, 50 ಕೋಟಿ ಭಾರತೀಯರಿಗೆ ಸೇವೆಯನ್ನೊದಗಿಸಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಭಾಗವಾಗಿ 35 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದ್ದು, ಅದರಿಂದಾಗಿ ಪ್ರತಿಯೊಬ್ಬ ಭಾರತೀಯನೂ ಬ್ಯಾಂಕ್ ಖಾತೆಗಳನ್ನು ಹೊಂದುವಂತೆ ಮಾಡಿದೆ. ಮೋದಿ ಸರ್ಕಾರವು ವಿವಿಧ ವಿಭಾಗಗಳಿಗೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ.
ಬಡವರ ಬಾಳಲ್ಲಿ ಪ್ರಜ್ವಲಿಸಿದ ‘ಉಜ್ವಲ’ ಯೋಜನೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನವನ್ನು ಅಂದಾಜು 7 ಕೋಟಿಗೂ ಅಧಿಕ ಜನರು ಪಡೆದಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕವಿಲ್ಲದ ಸುಮಾರು 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೇವೆ ಒದಗಿಸಲಾಗಿದೆ. 2022ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ಹೊಂದಿದೆ. PM ಕಿಸಾನ್ ಸಮ್ಮಾನ್ ನಿಧಿ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, E-NAM ನಂತಹ ಯೋಜನೆಗಳ ಮೂಲಕ ಕೃಷಿಗೆ ಉತ್ತೇಜನ ನೀಡಿದ್ದಾರೆ.
ಸ್ವಚ್ಛ ಭಾರತ್ ಮಿಷನ್
ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ 2014 ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದರು. ಮುಂದಿನ ಪೀಳಿಗೆಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆದ್ದಾರಿ, ರೈಲ್ವೆ, ಜಲಮಾರ್ಗಗಳನ್ನು ನಿರ್ಮಿಸಿದೆ.