ನವದೆಹಲಿ/ರಾಯಪುರ:ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಸಾರ್ವಜನಿಕ ಸಭೆಯೊಂದರಲ್ಲಿ ತಮ್ಮ ರೇಖಾಚಿತ್ರ ಹಿಡಿದು ಗಮನ ಸೆಳೆದಿದ್ದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಹೆಣ್ಣುಮಕ್ಕಳು ದೇಶದ ಉಜ್ವಲ ಭವಿಷ್ಯ ಎಂದು ಬಾಲಕಿಯನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.
ಛತ್ತೀಸ್‌ಗಢದ ಕಂಕೇರ್ದಲ್ಲಿ ಗುರುವಾರ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಾರ್ವಜನಿಕ ಸಭೆಯಲ್ಲಿ ಆಕಾಂಕ್ಷಾ ಎಂಬ ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರು ಮೋದಿ ಅವರ ರೇಖಾಚಿತ್ರ ಹಿಡಿದು ಕೈ ಬೀಸುತ್ತಾ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ, ಬಾಲಕಿಯ ತನ್ನ ಕೈಯಲ್ಲಿ ರೇಖಾಚಿತ್ರ ಹಿಡಿದಿರುವುದನ್ನು ಗಮನಿಸಿದ್ದರು.
ಅಲ್ಲದೇ, ತಮ್ಮ ಭಾಷಣದ ಮಧ್ಯೆ ಬಾಲಕಿಯನ್ನು ಉದ್ದೇಶಿಸಿ ಮೋದಿ, ಮಗಳೇ ನಾನು ನಿನ್ನ ಕೈಯಲ್ಲಿರುವ ಚಿತ್ರವನ್ನು ನೋಡಿದ್ದೇನೆ. ನೀನು ದೊಡ್ಡ ಕೆಲಸ ಮಾಡಿ ಅದನ್ನು ತಂದಿರುವೆ. ನಾನು ನಿನಗೆ ಆರ್ಶೀವಾದ ಮಾಡುವೆ. ಆದರೆ, ನೀನು ಎಷ್ಟು ಸಮಯದಿಂದ ನಿಂತಿರುವೆ. ನಿನಗೆ ಸುಸ್ತಾಗಬಹುದು. ಈಕೆ ಚಿತ್ರವನ್ನು ನನಗೆ ಕೊಡಲು ತಂದಿದ್ದಾಳೆ ಎಂದು ನಾನು ನಂಬುತ್ತೇನೆ. ಧನ್ಯವಾದ ಮಗಳೇ, ಆ ಚಿತ್ರದಲ್ಲಿ ನಿನ್ನ ವಿಳಾಸವನ್ನು ಬರೆದು ಕಳುಹಿಸು, ನಾನು ನಿನಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದರು.
ಅಂತೆಯೇ, ಬಾಲಕಿ ಆಕಾಂಕ್ಷಾಗೆ ಪ್ರಧಾನಿ ಮೋದಿ ಪತ್ರ ಬರೆಯುವ ಮೂಲಕ ತಮ್ಮ ಮಾತನ್ನು ಈಡೇರಿಸಿದ್ದಾರೆ. ನಿನ್ನ ಜೀವನ ಯಶಸ್ಸಿನೊಂದಿಗೆ ಮುನ್ನಡೆಯಲಿ. ಸಮಾಜಕ್ಕೆ ಮತ್ತು ಕುಟುಂಬಕ್ಕೆ ಕೀರ್ತಿ ತರಲು ಸಾಧ್ಯವಾಗಲಿ. ಮುಂದಿನ 25 ವರ್ಷಗಳು ನಿಮ್ಮಂತಹ ಹೆಣ್ಣುಮಕ್ಕಳು ಸೇರಿದಂತೆ ಯುವ ಪೀಳಿಗೆಗೆ ಮಹತ್ವದ್ದಾಗಿದೆ. ಹೆಣ್ಣುಮಕ್ಕಳು ದೇಶದ ಉಜ್ವಲ ಭವಿಷ್ಯ. ಅವರಿಂದ ಪಡೆಯುವ ವಾತ್ಸಲ್ಯ ಮತ್ತು ಆತ್ಮೀಯತೆಯ ಭಾವವೇ ರಾಷ್ಟ್ರ ಸೇವೆಯಲ್ಲಿ ಶಕ್ತಿಯಾಗಿದೆ. ನಮ್ಮ ಹೆಣ್ಣುಮಕ್ಕಳಿಗೆ ಆರೋಗ್ಯಕರ, ಸುರಕ್ಷಿತ ಮತ್ತು ಸುಸಜ್ಜಿತ ರಾಷ್ಟ್ರವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಬಾಲಕಿಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳೊಂದಿಗೆ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದೆ. 90 ಸದಸ್ಯರ ಬಲದ ಛತ್ತೀಸ್ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ನವೆಂಬರ್ 7ರಂದು ಮೊದಲ ಹಂತದ ಮತದಾನ ನಡೆದರೆ, ನ.7ರಂದು ಎರಡನೇ ಎರಡನೇ ಹಂತದ ಚುನಾವಣೆ ನಡೆಯಲಿದೆ. ಸದ್ಯ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಬಿಜೆಪಿ ಗೆದ್ದರೆ, 500 ರೂ.ಗೆ ಎಲ್ಪಿಸಿ ಸಿಲಿಂಡರ್ ಹಾಗೂ ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂಪಾಯಿ ಆರ್ಥಿಕ ನೆರವು ನೀಡುವುದು ಸೇರಿ ಅನೇಕ ಚುನಾವಣಾ ಆಶ್ವಾಸನೆಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ:'ಛತ್ತೀಸ್‌ಗಡದಲ್ಲಿ ಮೋದಿಜೀ ಗ್ಯಾರಂಟಿ': ₹ 500ಕ್ಕೆ ಗ್ಯಾಸ್ ಸಿಲಿಂಡರ್, ವಿವಾಹಿತ ಮಹಿಳೆಯರಿಗೆ ₹ 12,000!