ನವದೆಹಲಿ/ರೋಮ್: "ಉಸಿರಾಟದ ತೊಂದರೆಯಿಂದ ಬುಧವಾರ ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪೋಪ್ ಫ್ರಾನ್ಸಿಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ಕ್ಲಿನಿಕಲ್ ತಪಾಸಣೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಬ್ರಾಂಕೈಟಿಸ್(ಉಸಿರಾಟದ ಸೋಂಕು) ಇರುವುದು ಗೊತ್ತಾಗಿತ್ತು. ಬಳಿಕ ಪ್ರತಿಜೀವಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೋಮ್‌ನಲ್ಲಿ ವೈದ್ಯರು ಹೇಳಿದ್ದರು.
"ಪೋಪ್ ಫ್ರಾನ್ಸಿಸ್ ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ" ಎಂದು ಮೋದಿ ಟ್ವೀಟ್‌ನಲ್ಲಿ ಹಾರೈಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಪೋಪ್ ಫ್ರಾನ್ಸಿಸ್ ಅವರ ಚೇತರಿಕೆಗೆ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ. ಬ್ರಾಂಕೈಟಿಸ್ ಸೋಂಕಿಗೆ ಇಂಟ್ರಾವೆನಸ್ ಪ್ರತಿಜೀವಕಗಳನ್ನು ನೀಡಿದ ನಂತರ ಫ್ರಾನ್ಸಿಸ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಪೋಪ್ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
"86 ವರ್ಷದ ಪೋಪ್ ಫ್ರಾನ್ಸಿಸ್ ರಾತ್ರಿ ಚೆನ್ನಾಗಿ ನಿದ್ರಿಸಿದ್ದಾರೆ. ಬೆಳಗ್ಗೆ ಪ್ರಾರ್ಥನೆ ಮಾಡಿ ಉಪಹಾರ ಸೇವಿಸಿದರು. ನಂತರ ಅವರು ಕೆಲವು ಪತ್ರಿಕೆಗಳನ್ನು ಓದಿದರು. ಆರೋಗ್ಯ ಕ್ರಮೇಣ ಸುಧಾರಿಸುತ್ತಿದೆ ಮತ್ತು ಯೋಜಿತ ಚಿಕಿತ್ಸೆಗಳು ಮುಂದುವರೆದಿದೆ" ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಹೇಳಿದರು.
ಪೋಪ್ ಫ್ರಾನ್ಸಿಸ್ ತಮ್ಮ ಅಧಿಕೃತ ಟ್ವಿಟರ್ನಲ್ಲಿ ವಿಶ್ವ ನಾಯಕರುಗಳ ಹಾರೈಕೆಗಾಗಿ ಧನ್ಯವಾದ ತಿಳಿಸಿದ್ದಾರೆ. "ನಿಮ್ಮ ಪ್ರಾರ್ಥನೆಗಾಗಿ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.