ನವದೆಹಲಿ: ಭಾರತದ ಎಂಟು ರಾಜ್ಯಗಳು ಇಂದು ತಮ್ಮ ರಚನೆಯಾದ ದಿನವನ್ನು ಆಚರಿಸಿಕೊಳ್ಳುತ್ತಿವೆ. ಈ ಹಿನ್ನೆಲೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್ಗಢ, ಹರಿಯಾಣ, ಮಧ್ಯಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಎಕ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಮೋದಿ, ಭಾರತದ ಒಟ್ಟಾರೆ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದಕ್ಕಾಗಿ ರಾಜ್ಯಗಳನ್ನು ಪ್ರಧಾನಿ ಶ್ಲಾಘಿಸಿದರು.
ಪೋಸ್ಟ್ ಒಂದರಲ್ಲಿ "ರಾಜ್ಯದ ಸಂಸ್ಥಾಪನಾ ದಿನದಂದು ಹರಿಯಾಣದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ರಾಜ್ಯ ಕೃಷಿ ಹಾಗೂ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ದೇಶಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಇಲ್ಲಿನ ಯುವಕರು ಕೂಡ ಅನ್ವೇಷಣೆಯ ಲೋಕದಲ್ಲಿ ತಮ್ಮ ಸಾಧನೆಯ ಪತಾಕೆ ಹಾರಿಸುತ್ತಿದ್ದಾರೆ. ಈ ರಾಜ್ಯ ಹೀಗೆಯೇ ಮುಂದೆಯೂ ಅಭಿವೃದ್ಧಿಯ ಪ್ರತಿ ಪ್ಯಾರಾಮೀಟರ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಹಾಗಾಗಲಿ ಎಂದು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ "ರಾಜ್ಯದ ಸಂಸ್ಥಾಪನಾ ದಿನದಂದು ಮಧ್ಯಪ್ರದೇಶದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರತಿದಿನ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತಿರುವ ಮಧ್ಯಪ್ರದೇಶ ಈ ಅಮೃತಕಾಲದಲ್ಲಿ ದೇಶದ ಸಂಕಲ್ಪಗಳನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಈ ರಾಜ್ಯವು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ನಾನು ಬಯಸುತ್ತೇನೆ" ಎಂದು ಹಾರೈಸಿದ್ದಾರೆ.
ಮತ್ತೊಂದು ಪ್ರತ್ಯೇಕ ಪೋಸ್ಟ್ನಲ್ಲಿ ಪಿಎಂ ಮೋದಿ, "ಛತ್ತೀಸ್ಗಢದ ಸಹೋದರ, ಸಹೋದರಿಯರಿಗೆ ರಾಜ್ಯ ಸಂಸ್ಥಾಪನಾ ದಿನಕ್ಕೆ ಶುಭಾಶಯಗಳು. ಇಲ್ಲಿನ ಜನರ ಉತ್ಸಾಹವೇ, ರಾಜ್ಯವನ್ನು ವಿಶೇಷವಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಬುಡಕಟ್ಟು ಸಮುದಾಯಗಳು ಸಂಸ್ಕೃತಿ ಶ್ರೀಮಂತಗೊಳಿಸಲು ಬಹಳ ಮುಖ್ಯವಾದ ಕೊಡುಗೆ ನೀಡಿವೆ. ಈ ರಾಜ್ಯದ ವೈಭವಯುತವಾದ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆ ಎಲ್ಲರನ್ನೂ ಆಕರ್ಷಿಸುತ್ತದೆ. ನೈಸರ್ಗಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ತುಂಬಿರುವ ಛತ್ತೀಸ್ಗಢಕ್ಕೆ ಉಜ್ವಲ ಭವಿಷ್ಯವನ್ನು ನಾನು ಕೋರುತ್ತೇನೆ" ಎಂದು ಬರೆದಿದ್ದಾರೆ.