ನವದೆಹಲಿ:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯರು ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು, ದೀರ್ಘಾಯುಷ್ಯದೊಂದಿಗೆ ಆರೋಗ್ಯವಂತರಾಗಿ ಬಾಳಿ ಎಂದು ಹಾರೈಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಶುಭ ಕೋರಿದ್ದು, ಖರ್ಗೆ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿದಾಯಕ. ನಿಮಗೆ ಉತ್ತಮ ಆರೋಗ್ಯವನ್ನು ಬಯಸುತ್ತೇನೆ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, ಖರ್ಗೆ ಜಿ ಅವರಿಗೆ ಜನ್ಮದಿನದ ಶುಭಾಶಯಗಳು, ನಿಮ್ಮ ಬುದ್ಧಿವಂತಿಕೆ ಮತ್ತು ಅನುಭವ ದೇಶಾದ್ಯಂತದ ಕಾಂಗ್ರೆಸ್ಸಿಗರು ಮತ್ತು ಮಹಿಳೆಯರಿಗೆ ಶಕ್ತಿಯ ಮೂಲ ಎಂದು ಶುಭ ಕೋರಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಂಗ್ರೆಸ್ ಅಧ್ಯಕ್ಷರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಖರ್ಗೆ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಭ ಕೋರಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಯಾದವ್, ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷದ ಜೀವನವನ್ನು ದಯಪಾಲಿಸಲಿ ಎಂದು ಹರಸಿದ್ದಾರೆ. ಖರ್ಗೆ ಶುಭ ಹಾರೈಸಿದ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸಿದ್ದಾರೆ.
ಜುಲೈ 21, 1942 ರಂದು ಕರ್ನಾಟಕದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2021ರಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಸತತ 10 ಬಾರಿ ಚುನಾವಣೆಯಲ್ಲಿ ಗೆದ್ದಿರುವ ಖರ್ಗೆ ದಾಖಲೆ ಬರೆದಿದ್ದಾರೆ. ಮೊದಲ ಬಾರಿಗೆ 1972ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗುರ್ಮಿಟ್ಕಲ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಅದೇ ಕ್ಷೇತ್ರದಿಂದ ಒಂಬತ್ತು ಬಾರಿ ಸತತವಾಗಿ ಗೆಲುವು ಸಾಧಿಸಿದ್ದಾರೆ. (1972, 1978, 1983, 1985, 1989, 1994, 1999, 2004, 2008, 2009).
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇಂದ್ರದ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:ಪೊಲೀಸ್ ಸಿಬ್ಬಂದಿ, ಗನ್ ಸೆಲ್ಯೂಟ್‌ಗಳಿಲ್ಲದೆ ನೆರವೇರಿದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅಂತ್ಯಕ್ರಿಯೆ