ನವದೆಹಲಿ:ಯುವಕರು, ಮಧ್ಯಮ ವರ್ಗ, ಬಡವರ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಆಯವ್ಯಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ. ಇದೊಂದು ಉತ್ತಮವಾದ ಬಜೆಟ್ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಬಜೆಟ್ ಕುರಿತಂತೆ ಮಾತನಾಡಿದ ಪ್ರಧಾನಿ, ವಿಶ್ವವೇ ಸೋಂಕಿನಿಂದ ಕಂಗಾಲಾಗಿದೆ. ದೇಶ ಈಗಲೂ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಇದರ ಮಧ್ಯೆಯೂ ಆರ್ಥಿಕ ಪುನಶ್ಚೇತನ ಆಶಾದಾಯಕವಾಗಿದೆ. ನಾವು ಆಧುನಿಕ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಬಜೆಟ್ನ ಸಂಪೂರ್ಣ ವಿವರಣೆ ಮಾಡುವುದು ಕಷ್ಟಸಾಧ್ಯ. ಬಜೆಟ್ನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ. ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಮೂಲ ಸೌಲಭ್ಯಗಳನ್ನು ಹೇರಳವಾಗಿ ನೀಡಲಾಗಿದೆ ಎಂದು ಬಜೆಟ್ ಅನ್ನು ಅವರು ಪ್ರಶಂಸಿಸಿದರು.
80 ಲಕ್ಷ ಮನೆಗಳಿಗೆ 48 ಸಾವಿರ ಕೋಟಿ
ದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗಾಗಿ 80 ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ಅದಕ್ಕಾಗಿ ಬಜೆಟ್ನಲ್ಲಿ 48 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮಹಿಳೆಯರನ್ನು ಮನೆಯ ಮಾಲೀಕರನ್ನಾಗಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 7 ವರ್ಷಗಳಲ್ಲಿ 3 ಕೋಟಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದ 9 ಕೋಟಿ ಮನೆಗಳಿಗೆ ನಲ್ಲಿಯ ಮೂಲಕ ನೀರು ಒದಗಿಸಲಾಗಿದೆ. ಬಡವರ ಶಿಕ್ಷಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನದಿ ಜೋಡಣೆಯ ಬಗ್ಗೆಯೂ ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಆರ್ಥಿಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ:ಕೊರೊನಾ ಸಂಕಷ್ಟದ ಮಧ್ಯೆಯೂ ದೇಶ ಆರ್ಥಿಕ ಚೇತರಿಕೆಯಲ್ಲಿ ದಾಖಲೆಯ ಪ್ರಗತಿ ಕಾಣುತ್ತಿದೆ. ಆರ್ಥಿಕ ಸೂಚ್ಯಂಕ ಏರಿಕೆಯಾಗುತ್ತಿರುವ ವಿಶ್ವದ ವಿವಿಧ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ. ಭಾರತ ಅಭಿವೃದ್ಧಿಯ ಬಗ್ಗೆ ಶ್ರೀಮಂತ ದೇಶಗಳಾದ ಸಂಯುಕ್ತ ರಾಷ್ಟ್ರಗಳೂ ಕೂಡ ಮೆಚ್ಚುಗೆ ಸೂಚಿಸಿವೆ ಎಂದು ಮೋದಿ ಹೇಳಿದರು.
ಗಡಿ ಗ್ರಾಮಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ:ಪ್ರವಾಸೋದ್ಯಮ ಅಭಿವೃದ್ಧಿಯಾದರೆ, ದೇಶದ ಆರ್ಥಿಕತೆಯೂ ಹೆಚ್ಚುತ್ತದೆ. ಇದರಿಂದಾಗಿ ದೇಶದ ಗಡಿ ಗ್ರಾಮಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಇದಲ್ಲದೇ, ಕೇತ್- ಬೇತವಾ ಯೋಜನೆ ರೈತರ ಜೀವನವನ್ನೇ ಬದಲಿಸಲಿದೆ. ಸಣ್ಣ ರೈತರು ಅಭಿವೃದ್ಧಿಯಾದರೆ, ಇದರ ಜೊತೆಗೆ ಪ್ರತಿ ಗ್ರಾಮಗಳೂ ಪ್ರಗತಿ ಸಾಧಿಸಲಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
2 ಲಕ್ಷ 30 ಸಾವಿರ ಕೋಟಿ ಜಿಡಿಪಿ ದರ ದಾಖಲಿಸಿದೆ. ಇದು 7 ವರ್ಷಗಳಲ್ಲಿ 630 ಬಿಲಿಯನ್ನಷ್ಟು ಹೆಚ್ಚಾಗಿದೆ. ಇದು ಸರ್ಕಾರದ ಪರಿಣಾಮಕಾರಿ ನೀತಿಗಳಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ